ಕನ್ನಡಪ್ರಭ ವಾರ್ತೆ ಹಾಸನ

ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಗೆ ಹಿಂದೆ ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಿಗೆ ತೆರಳುವುದು ಅನಿವಾರ್ಯವಾಗಿತ್ತು. ಆದರೆ ಈಗ ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಅಡಿಯಲ್ಲಿ ಹಿಮ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ರೈನ್ ಹೆಲ್ತ್ ಕ್ಲಿನಿಕ್ ಮೂಲಕ ಜಿಲ್ಲೆಯ ಜನತೆಗೆ ಪರಿಣಿತ ನರರೋಗ ತಜ್ಞರ ಸೇವೆ ಸ್ಥಳೀಯವಾಗಿಯೇ ದೊರೆಯುತ್ತಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ರಾಘವೇಂದ್ರ ಪ್ರಸಾದ್ ಕೆ.ಯು. ಕರೆ ನೀಡಿದರು.

ವಿಶ್ವ ಮೆದುಳು ದಿನಾಚರಣೆ-೨೦೨೬ ಅಂಗವಾಗಿ ಹಿಮ್ಸ್‌ನ ಬ್ರೈನ್ ಹೆಲ್ತ್ ಕ್ಲಿನಿಕ್‌ನಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮೆದುಳು ಮಾನವ ದೇಹದ ಅತ್ಯಂತ ಪ್ರಮುಖ ಅಂಗವಾಗಿದ್ದು, ಅದರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪಾರ್ಶ್ವವಾಯು (ಸ್ಟ್ರೋಕ್), ಮೂರ್ಚೆ ರೋಗ, ತೀವ್ರ ತಲೆನೋವು, ಮರೆವಿನ ಕಾಯಿಲೆ ಸೇರಿದಂತೆ ವಿವಿಧ ನರರೋಗಗಳಿಗೆ ಈಗ ಹಾಸನದಲ್ಲಿಯೇ ತಜ್ಞರ ಸಲಹೆ, ಪರೀಕ್ಷೆ ಹಾಗೂ ಚಿಕಿತ್ಸೆ ಲಭ್ಯವಿರುವುದು ಜಿಲ್ಲೆಯ ಜನತೆಗೆ ಮಹತ್ತರ ಅನುಕೂಲವಾಗಿದೆ ಎಂದು ತಿಳಿಸಿದರು.ಹಿಮ್ಸ್‌ನ ನಿವಾಸಿ ವೈದ್ಯಾಧಿಕಾರಿ ಡಾ. ಪ್ರವೀಣ್ ಜಿ. ಮಾತನಾಡಿ, ಮೆದುಳಿನ ಕಾಯಿಲೆಗಳ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ರೋಗದ ತೀವ್ರತೆಯನ್ನು ನಿಯಂತ್ರಿಸಬಹುದಾಗಿದ್ದು, ಶಾಶ್ವತ ಅಂಗವೈಕಲ್ಯ ಸೇರಿದಂತೆ ಹಲವು ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ಹೇಳಿದರು. ಯಾವುದೇ ಲಕ್ಷಣಗಳನ್ನು ನಿರ್ಲಕ್ಷಿಸದೆ ತಜ್ಞರ ಸಲಹೆ ಪಡೆಯುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಾಸನ ಶಾಖೆಯ ವ್ಯವಸ್ಥಾಪಕ ಧನಂಜಯ್ ಕುಮಾರ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯ ಬದಲಾವಣೆಗಳಿಂದ ಮೆದುಳಿನ ಕಾಯಿಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ವಿಶೇಷವಾಗಿ ಪಾರ್ಶ್ವವಾಯು ರೋಗಿಗಳ ಪುನರ್ವಸತಿ ಚಿಕಿತ್ಸೆಗೆ ನೆರವಾಗುವ ಫಿಸಿಯೋಥೆರಪಿ ಉಪಕರಣಗಳನ್ನು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ವತಿಯಿಂದ ಹಿಮ್ಸ್ ಬ್ರೈನ್ ಹೆಲ್ತ್ ಕ್ಲಿನಿಕ್‌ಗೆ ಕೊಡುಗೆಯಾಗಿ ನೀಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜಕಿ ಲತಾಮಣಿ ಮಾತನಾಡಿ, ಹಿಮ್ಸ್ ಜಿಲ್ಲಾ ಆಸ್ಪತ್ರೆಯ ಮೊದಲ ಮಹಡಿಯ ೧೩-ಡಿ ಕೊಠಡಿಯಲ್ಲಿ ಬ್ರೈನ್ ಹೆಲ್ತ್ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಪಾರ್ಶ್ವವಾಯು, ಮೂರ್ಚೆ ರೋಗ, ತೀವ್ರ ತಲೆನೋವು, ಮರೆವಿನ ಸಮಸ್ಯೆ ಸೇರಿದಂತೆ ವಿವಿಧ ನರರೋಗಗಳಿಗೆ ಸಮಗ್ರ ಚಿಕಿತ್ಸೆ ಮತ್ತು ಸಲಹೆ ನೀಡಲಾಗುತ್ತಿದೆ ಎಂದು ಹೇಳಿದರು. ಕ್ಲಿನಿಕ್‌ನಲ್ಲಿ ನರರೋಗ ತಜ್ಞರು, ಸ್ಪೀಚ್ ಥೆರಪಿಸ್ಟ್, ಸೈಕಾಲಜಿಸ್ಟ್, ಫಿಸಿಯೋಥೆರಪಿಸ್ಟ್ ಹಾಗೂ ತರಬೇತಿ ಪಡೆದ ನರ್ಸ್‌ಗಳ ಸೇವೆ ಲಭ್ಯವಿದ್ದು, ರೋಗಿಗಳಿಗೆ ಒಂದೇ ಸ್ಥಳದಲ್ಲಿ ಸಮಗ್ರ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗಿದೆ. ರೋಗಿಗಳ ಪುನರ್ವಸತಿಗೆ ನೆರವಾಗುವ ಫಿಸಿಯೋಥೆರಪಿ ಉಪಕರಣಗಳನ್ನು ಕೊಡುಗೆಯಾಗಿ ನೀಡಿದ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗೆ ಅವರು ಕೃತಜ್ಞತೆ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ಬಿಂದು ಸಿ., ಡಾ. ಮಧು ಜಿ., ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮದ ನರರೋಗ ತಜ್ಞೆ ಡಾ. ವತ್ಸಲ ಲಕ್ಷ್ಮೀ, ಐಶ್ವರ್ಯ, ಮಾನಸ, ಶಿಲ್ಪ, ಸುಮಲತಾ ಹಾಗೂ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.