ಸಾರಾಂಶ
ವಿಶೇಷಚೇತನ ಮಕ್ಕಳಿಗೆ ಅನುಕಂಪದ ಜೊತೆ ಅವಕಾಶ ನೀಡಬೇಕು.
ಕುಮಟಾ: ವಿಶೇಷಚೇತನ ಮಕ್ಕಳಿಗೆ ಅನುಕಂಪದ ಜೊತೆ ಅವಕಾಶ ನೀಡಬೇಕು. ಅವರಲ್ಲಿರುವ ವಿಶೇಷ ಗುಣಗಳನ್ನು ಹುಡುಕಿ ಪ್ರೋತ್ಸಾಹಿಸಿ ಆತ್ಮವಿಶ್ವಾಸ ತುಂಬುವುದರ ಮೂಲಕ ಅವರನ್ನು ಪುನಶ್ಚೇತನಗೊಳಿಸಬೇಕು ಎಂದು ಗೋರೆ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಅಧ್ಯಕ್ಷ ಡಾ. ಜಿ.ಜಿ. ಹೆಗಡೆ ಹೇಳಿದರು.
ತಾಲೂಕಿನ ಗೋರೆಯಲ್ಲಿರುವ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಜಿಪಂ ಮತ್ತು ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ೨೦೨೪-೨೫ನೇ ಸಾಲಿನ ಸಮನ್ವಯ ಶೈಕ್ಷಣಿಕ ಚಟುವಟಿಕೆ ಅಡಿಯಲ್ಲಿ ವಿಶೇಷ ಚೇತನ ಮಕ್ಕಳಿಗೆ ಕ್ರೀಡೆ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಉತ್ತಮ ಭವಿಷ್ಯಕ್ಕಾಗಿ ಮಕ್ಕಳಿಗೆ ಶಿಕ್ಷಣ ನೀಡಿ ಬದುಕುವ ಕಲೆಯನ್ನು ಕಲಿಸುವ ಮೂಲಕ ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸಬೇಕು ಎಂದರು.
ಮುಖ್ಯಅತಿಥಿ ಕೆನರಾ ಎಕ್ಸ್‌ಲೆನ್ಸ್ ಪಿಯು ಕಾಲೇಜಿನ ಪ್ರಾಚಾರ್ಯ ರಾಮ ಭಟ್ಟ ಮಾತನಾಡಿ, ವಿಶೇಷಚೇತನರಿಗೆ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಸರ್ಕಾರದ ಇಂತಹ ಕಾರ್ಯಕ್ರಮಗಳು ಉಪಯುಕ್ತ. ವಿಶೇಷಚೇತನರಲ್ಲೂ ಸಾಕಷ್ಟು ಪ್ರತಿಭೆ ಇದೆ, ಸಾಧಕರಿದ್ದಾರೆ. ಸರಿಯಾದ ಅವಕಾಶ ಮತ್ತು ಮಾರ್ಗದರ್ಶನ ಅಗತ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಬಿಇಒ ರಾಜೇಂದ್ರ ಭಟ್ಟ ಮಾತನಾಡಿ, ವಿಶೇಷಚೇತನರು ಮಾತನಾಡುವ ದೇವರಿದ್ದಂತೆ. ನಾವು ಕೊಡುವ ಪ್ರೀತಿಯ ನಾಲ್ಕು ಪಟ್ಟು ಪ್ರೀತಿಯನ್ನು ಅವರು ನಮಗೆ ನೀಡುತ್ತಾರೆ. ಅನುಭವಕ್ಕಿಂತ ಜ್ಞಾನ ಮತ್ತೊಂದಿಲ್ಲ ಎಂದರು.
ಮಕ್ಕಳು ಸ್ವಾಗತಗೀತೆ ಹಾಡಿದರು. ಕೇಶವ ನಾಯ್ಕ ಸ್ವಾಗರಿಸಿ ಪ್ರಾಸ್ತಾವಿಕ ಮಾತನಾಡಿದರು. ವಿನಾಯಕ ನಾಯ್ಕ ಧನ್ಯವಾದ ಸಮರ್ಪಿಸಿದರು.