ಪಾಂಬೂರು ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಬೋಚಿ ಸ್ಪರ್ಧೆ ನೆರವೇರಿತು.

ಉಡುಪಿ ಜಿಲ್ಲಾ ವಿಶೇಷ ಮಕ್ಕಳ ಬೋಚಿ ಸ್ಪರ್ಧೆ ಉದ್ಘಾಟನೆ ಉಡುಪಿ: ದೈಹಿಕ ನ್ಯೂನತೆಯಿಂದ ಬಳಲುತ್ತಿರುವ ವಿಶೇಷ ಚೇತನರು ಉತ್ತಮ ಸಾಧನೆಗಳ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಇಂತವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲ ಸಿ. ಕೆ. ಹೇಳಿದ್ದಾರೆ.

ಶನಿವಾರ ಇಲ್ಲಿನ ಪಾಂಬೂರು ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಲಯನ್ಸ್ ಕ್ಲಬ್ - ಬಂಟಕಲ್ ಜಾಸ್ಮಿನ್ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಬೋಚಿ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.ವಿಶೇಷ ಚೇತನರಿಗೆ ಅನುಕಂಪ ತೋರಿಸುವ ಬದಲು ಅವಕಾಶ ಕಲ್ಪಿಸಿಕೊಟ್ಟರೆ ಅವರಲ್ಲಿ ಇರುವ ಸಾಮರ್ಥ್ಯ‌ ಏನೆಂಬುದನ್ನು ಸಾಬೀತುಪಡಿಸಲು ಸಾಧ್ಯವಿದೆ. ವಿಶೇಷ ಚೇತನ ಮಕ್ಕಳಿಗೆ ಸರ್ಕಾರ ಕೂಡ ಬೆಂಬಲ ನೀಡುತ್ತಿದೆ. ವಿಶೇಷ ಚೇತನ ಮಕ್ಕಳಿಗೆ ನಿರಂತರ ಪ್ರೋತ್ಸಾಹದ ಮೂಲಕ ಅವರಿಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಅವಕಾಶ ನೀಡಬೇಕು. ಜಿಲ್ಲೆಯಲ್ಲಿ ಆಟಿಸಂ ಮಕ್ಕಳಿಗಾಗಿ ವಿಶೇಷ ಪಾರ್ಕ್ ನಿರ್ಮಾಣಕ್ಕೆ ಜಿ.ಪಂ. ವತಿಯಿಂದ ಚಿಂತನೆ ನಡೆಸಲಾಗಿದೆ ಎಂದರು.ಜಿಲ್ಲಾ ವಿಕಲಚೇನತರ ಸಬಲೀಕರಣ ಅಧಿಕಾರಿ ರತ್ನ ಮಾತನಾಡಿ, ವಿಶೇಷ ಚೇನತ ಮಕ್ಕಳಿಗೆ ಸಾಮಾನ್ಯ ಮಕ್ಕಳಂತೆ ಕ್ರೀಡೆ ಹಾಗೂ ಇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಿದಾಗ ಅವರಲ್ಲಿ ಕೂಡ ಇತರ ಸಾಮಾನ್ಯ ಮಕ್ಕಳಿಗೆ ಕಡಿಮೆ ಇಲ್ಲ ಎನ್ನುವಂತಹ ಆತ್ಮ ವಿಶ್ವಾಸ ಮೂಡುವಂತಾಗುತ್ತದೆ ಎಂದರು.ಲಯನ್ಸ್ ಜಿಲ್ಲೆ 317 ಸಿ ಇದರ ಎನ್.ಎಂ. ಹೆಗ್ಡೆ, ಬೆಳ್ಳೆ ಪಂಚಾಯಿತಿ ಅಧ್ಯಕ್ಷೆ ದಿವ್ಯ ವಿ. ಆಚಾರ್ಯ ಶುಭ ಹಾರೈಸಿದರು.ಲಯನ್ಸ್ ಕ್ಲಬ್, ಬಂಟಕಲ್ ಜಾಸ್ಮಿನ್ ಅಧ್ಯಕ್ಷ ಜುಲಿಯಾನಾ ರೀಟಾ ಮೊನಿಸ್, ಮಾನಸ ಸಂಸ್ಥೆಯ ಪ್ರಾಂಶುಪಾಲೆ ಸಿಸ್ಟರ್ ವಿನ್ನಿಗೊನ್ಸಾಲ್ವಿಸ್, ಸಹಕಾರ್ಯದರ್ಶಿ ಮೇರಿ ಡಿಸೋಜಾ, ಕೋಶಾಧಿಕಾರಿ ಜೊಸೇಫ್ ಎಫ್ ನೊರೊನ್ಹಾ ಟ್ರಸ್ಟಿಗಳಾದ ಡಾ|ಎಡ್ವರ್ಡ್ ಲೋಬೊ, ಹೆನ್ರಿ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು. ಮಾನಸ ಟ್ರಸ್ಟ್ ಅಧ್ಯಕ್ಷ ಜೋನ್ ಮಾರ್ಟಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಜೆರಾಲ್ಡ್ ಪಿಂಟೊ ವಂದಿಸಿದರು. ಹೇಮಲತಾ ನಿರೂಪಿಸಿದರು.