ಸಾರಾಂಶ
ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ಜಿಲ್ಲಾಡಳಿತಗಳ ಸಹಯೋಗದಲ್ಲಿ ನವ ಜೀವನ- ವಿಶೇಷಚೇತನರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ವಿಶೇಷ ಚೇತನರು ತಮ್ಮ ನ್ಯೂನತೆಗಳನ್ನು ಬದಿಗೊತ್ತಿ ಸರ್ಕಾರ ನಿಮಗಾಗಿ ನೀಡುವ ಎಲ್ಲ ಸೌಲಭ್ಯಗಳನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸಿಕೊಂಡು, ಸಮಾಜದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.ಅವರು ಶುಕ್ರವಾರ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ಜಿಲ್ಲಾಡಳಿತಗಳ ಸಹಯೋಗದಲ್ಲಿ ನವ ಜೀವನ- ವಿಶೇಷಚೇತನರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವಿಶೇಷ ಚೇತನರು ದುರ್ಬಲರಲ್ಲ ಎಂಬ ಭಾವನೆ ಅವರಲ್ಲಿ ಮೂಡಿಸಲು ಮಣಿಪಾಲ್ ಟೆಕ್ನಾಲಜೀಸ್ ಸಂಸ್ಥೆಯವರು ಶಿಕ್ಷಣ, ಆರೋಗ್ಯ ಸೇರಿದಂತೆ ಮತ್ತಿತರ ಅವಶ್ಯಕತೆಗಳನ್ನು ಪೂರೈಸಲು ತಮ್ಮ ಸಿಎಸ್‌ಆರ್ ನಿಧಿಯನ್ನು ಬಳಸುತ್ತಿದ್ದು, ಇಂದು ವಿಶೇಷ ಚೇತನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಬ್ಯಾಟರಿ ಚಾಲಿತ ಗಾಲಿಕುರ್ಚಿಗಳನ್ನು ಹಾಗೂ ಶ್ರವಣ ಯಂತ್ರಗಳನ್ನು ನೀಡಲು ಬಳಸುತ್ತಿದ್ದಾರೆ. ಸಂಸ್ಥೆಯು ಇಂತಹ ಸಮಾಜಮುಖಿ ಕೆಲಸಗಳನ್ನು ಹೆಚ್ಚು ಹೆಚ್ಚು ಮಾಡುವಂತಾಗಲಿ ಹಾಗೂ ಸೌಕರ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಲಿ ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ದೇಶದ ನಾಗರಿಕರಂತೆ ವಿಶೇಷ ಚೇತನರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವುದು ಸಂವಿಧಾನದ ಆಶಯ. ಅದರಂತೆ ವಿಶೇಷಚೇತನರನ್ನು ಸಬಲೀಕರಣವನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆರೋಗ್ಯ ಸೇವೆಯಲ್ಲಿ ಹೊಸ ರೀತಿಯ ಉಪಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಜಿಲ್ಲೆ ಮಹತ್ವದ ಸ್ಥಾನ ಪಡೆಯುವಂತಾಗಲಿ ಎಂದ ಅವರು, ಸಲಕರಣೆಗಳನ್ನು ಪಡೆದ ಫಲಾನುಭವಿಗಳು ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಬೇಕು ಎಂದರು.ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್‌ನ ಅಧಿಕಾರಿ ರೊನಾಲ್ಡ್ ಡಿಸೋಜ ಯೋಜನೆಯ ಉದ್ದೇಶ ಕುರಿತು ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಶುಭಹಾರೈಸಿದರು. ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಪ್ರಶಾಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ ಉಪಸ್ಥಿತರಿದ್ದರು. ಆಲಂದೂರು ಮಂಜುನಾಥ ಎಸ್.ಗಾಣಿಗ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.ಇದೇ ಸಂದರ್ಭದಲ್ಲಿ ಮಣಿಪಾಲ್ ಲಿಮಿಟೆಡ್ ವತಿಯಿಂದ ನೀಡಲಾದ ಹಿಯರಿಂಗ್ ಏಡ್ ಕಿಟ್ ಅನ್ನು 14 ಜನ ಫಲಾನುಭವಿಗಳಿಗೆ ವಿತರಿಸಲಾಯಿತು. ಏಳು ಜನ ಫಲಾನುಭವಿಗಳಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿಯನ್ನು ಹಸ್ತಾಂತರಿಸಲಾಯಿತು ಹಾಗೂ ಸಾಧನ ಸಲಕರಣೆಯನ್ನು ನೀಡಿದ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್‌ಗೆ ಕೃತಜ್ಞತಾ ಪತ್ರವನ್ನು ನೀಡಲಾಯಿತು.