‘ಬಿ ಗುಡ್ ಡು ಗುಡ್’ ಕಾರ್ಯಕ್ರಮದ ಅಂಗವಾಗಿ ನಗರದ ಕೆನರಾ ಕಾಲೇಜು ಸಭಾಂಗಣದಲ್ಲಿ ಭಾನುವಾರ ‘ಯುವಜನ ಪ್ರೇರಕ ಸ್ವಾಮಿ ವಿವೇಕಾನಂದ’ ಎಂಬ ವಿಷಯದ ಬಗ್ಗೆ ಉಪನ್ಯಾಸ
ಮಂಗಳೂರು: ಸ್ವಾಮಿ ವಿವೇಕಾನಂದರು ವಿದ್ಯಾರ್ಥಿಯಾಗಿದ್ದಾಗಲೇ ಯುವಜನತೆಗೆ ಪ್ರೇರಣೆಯಾಗಿದ್ದರು. ಭಾರತದ ತತ್ವವನ್ನು ಜಗತ್ತಿನಾದ್ಯಂತ ಪಸರಿಸಿದ ಪರಿವ್ರಾಜಕರು ಸ್ವಾಮಿ ವಿವೇಕಾನಂದರು ಎಂದು ಸಮರ್ಥ ಭಾರತ ಟ್ರಸ್ಟಿ ರಾಜೇಶ್ ಪದ್ಮಾರ್ ಹೇಳಿದರು.
ಸಮರ್ಥ ಭಾರತ ಮಂಗಳೂರು ಇದರ ವತಿಯಿಂದ ‘ಬಿ ಗುಡ್ ಡು ಗುಡ್’ ಕಾರ್ಯಕ್ರಮದ ಅಂಗವಾಗಿ ನಗರದ ಕೆನರಾ ಕಾಲೇಜು ಸಭಾಂಗಣದಲ್ಲಿ ಭಾನುವಾರ ‘ಯುವಜನ ಪ್ರೇರಕ ಸ್ವಾಮಿ ವಿವೇಕಾನಂದ’ ಎಂಬ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.ಸ್ವಾಮಿ ವಿವೇಕಾನಂದರು ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ತರಗತಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ಮೇಧಾವಿಯಾಗಿ ಬೆಳೆದವರು. ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಯುವ ಜತೆಗೆ ಹೊರ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬದರ ಅರಿವೂ ಇರಬೇಕು. ವಿದ್ಯಾರ್ಥಿಯಾಗಿದ್ದ ನರೇಂದ್ರ ಅವರೆಡನ್ನೂ ಅರಿತಿದ್ದರು. ಜ್ಞಾನದ ಕಾರಣಕ್ಕಾಗಿ ನರೇಂದ್ರ ಹಾಗೂ ರಾಮಕೃಷ್ಣ ಪರಮಹಂಸರ ಸಂಬಂಧ ಬೆಳೆಯಿತು. ನರೇಂದ್ರನ ಪ್ರಶ್ನೆಗಳಿಗೆ ರಾಮಕೃಷ್ಣ ಪರಮಹಂಸರು ಸಮರ್ಪಕ ಉತ್ತರ ನೀಡಿದರು. ಇದರಿಂದ ಅವರಿಬ್ಬರ ನಡುವಿನ ಸಂಬಂಧ ಗಾಢವಾಯಿತು ಎಂದರು.ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾವಿಸಲು ಹೃದಯ, ಚಿಂತಿಸಲು ಮನಸ್ಸು ಮತ್ತು ಕಾರ್ಯನಿರ್ವಹಿಸಲು ಕೈಗಳು ಎಂಬ ತತ್ವಗಳನ್ನು ಕೇವಲ ಬೋಽಸಿದವರಷ್ಟೇ ಅಲ್ಲ, ತಮ್ಮ ಜೀವನದಾದ್ಯಂತ ಅವನ್ನು ಅನುಸರಿಸಿ ಬದುಕಿದವರಾಗಿದ್ದರು. ನಾಗರಿಕತೆ ಬದಲಾಗುತ್ತಾ ಹೋಗುವಾಗ, ಆ ಬದಲಾವಣೆಗಳಿಗೆ ಮಾತ್ರ ಹೊಂದಿಕೊಳ್ಳದೇ ಸಾಮಾಜಿಕ ಪರಿವರ್ತನೆಗಳ ನಡುವೆಯೂ ಸಾಂಸ್ಕೃತಿಕ ಮೌಲ್ಯಗಳನ್ನು ಕಾಯ್ದುಕೊಂಡು ಅನುಸರಿಸುವುದು ಅತ್ಯಂತ ಮಹತ್ವದ ವಿಷಯವೆಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಮಹಾನಗರ ಸಂಘಚಾಲಕ್ ಡಾ. ಸತೀಶ್ ರಾವ್, ವಿಭಾಗ ಸಂಪರ್ಕ ಪ್ರಮುಖ್ ಸೂರಜ್ ಇದ್ದರು. ವಿವೇಕಾನಂದರ ಆದರ್ಶ ಪ್ರತಿಬಿಂಬಿಸುವ ಪೋಸ್ಟರ್‌ನ್ನು ಬಿಡುಗಡೆಗೊಳಿಸಲಾಯಿತು.ರೀಶಲ್ ಫರ್ನಾಂಡಿಸ್ ಸ್ವಾಗತಿಸಿದರು. ಸಾಕ್ಷಿ ಎಲ್. ನಿರೂಪಿಸಿ, ವಂದಿಸಿದರು.