ಮಕ್ಕಳ ವಾಕ್ ಮತ್ತು ಶ್ರವಣ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಚಿಕಿತ್ಸೆ ಒದಗಿಸುವ ಸಲುವಾಗಿ ವಿಶೇಷವಾಗಿ ಚಾಮರಾಜನಗರ ಜಿಲ್ಲೆಯಲ್ಲೇ ರೂಪಿತವಾಗಿರುವ ಪ್ರಯಾಸ್ ಕರ‍್ಯಕ್ರಮವು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ರಾಜ್ಯಮಟ್ಟದಲ್ಲಿ ಮಾದರಿ ಕಾರ‍್ಯಕ್ರಮವಾಗಿ ಮೆಚ್ಚುಗೆ ಪಡೆದಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹೇಳಿದರು.

ಸಂತೇಮರಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಅಭಿಮತ । ಸಿಎಸ್‌ಆರ್ ಆರ್ಥಿಕ ನೆರವಿನಿಂದ ಪ್ರಯಾಸ್ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಕ್ಕಳ ವಾಕ್ ಮತ್ತು ಶ್ರವಣ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಚಿಕಿತ್ಸೆ ಒದಗಿಸುವ ಸಲುವಾಗಿ ವಿಶೇಷವಾಗಿ ಚಾಮರಾಜನಗರ ಜಿಲ್ಲೆಯಲ್ಲೇ ರೂಪಿತವಾಗಿರುವ ಪ್ರಯಾಸ್ ಕರ‍್ಯಕ್ರಮವು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ರಾಜ್ಯಮಟ್ಟದಲ್ಲಿ ಮಾದರಿ ಕಾರ‍್ಯಕ್ರಮವಾಗಿ ಮೆಚ್ಚುಗೆ ಪಡೆದಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹೇಳಿದರು.

ತಾಲೂಕಿನ ಸಂತೇಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಹಯೋಗದಲ್ಲಿ ಅಂಗನವಾಡಿ ಮಕ್ಕಳ ವಾಕ್ ಮತ್ತು ಶ್ರವಣ ದ್ವಿತೀಯ ಹಂತದ ತಪಾಸಣಾ ಹಾಗೂ ಪ್ರಯಾಸ್ ಕಾರ್ಯಕ್ರಮಕ್ಕೆ ನೆರವು ನೀಡುತ್ತಿರುವ ಸಂಸ್ಥೆಗಳಿಗೆ ಕೃತಜ್ಞತೆ ಗೌರವ ಸಲ್ಲಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮಾತು ಬಾರದ ಮತ್ತು ಕಿವಿ ಕೇಳದಿರುವ ಸಮಸ್ಯೆಗಳು ತಡವಾಗಿ ಪತ್ತೆಯಾದರೆ ಮಕ್ಕಳ ಶೈಕ್ಷಣಿಕ ಕಾರ್ಯಕ್ಷಮತೆ ಕ್ಷೀಣಿಸುತ್ತದೆ. ಈ ಸಮಸ್ಯೆಗೆ ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡದೇ ಹೋದರೆ ಮುಂದೆ ಅನೇಕ ಸವಾಲು ಎದುರಾಗುತ್ತವೆ. ಈ ಹಿನ್ನೆಲೆಯಲ್ಲಿ ತಪಾಸಣೆ, ವೈದ್ಯಕೀಯ ಚಿಕಿತ್ಸೆ, ಅಗತ್ಯವಿರುವ ಶ್ರವಣ ಸಾಧನಗಳನ್ನು ಒದಗಿಸುವ ಪ್ರಯಾಸ್ ಕಾರ‍್ಯಕ್ರಮವನ್ನು ಸಂಪೂರ್ಣವಾಗಿ ಸಿಎಸ್‌ಆರ್ ಆರ್ಥಿಕ ನೆರವಿನಿಂದ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 6 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಆರಂಭದಲ್ಲಿಯೇ ವಾಕ್ ಮತ್ತು ಶ್ರವಣ ತಪಾಸಣೆ ಕೈಗೊಳ್ಳಲಾಗಿದೆ. ಜಿಲ್ಲೆಯ ಅಂಗನವಾಡಿ ವ್ಯಾಪ್ತಿಯಲ್ಲಿ 6 ತಿಂಗಳಿಂದ 6 ವರ್ಷದೊಳಗಿನ 34,935 ಮಕ್ಕಳನ್ನು ಗುರುತಿಸಿ ಪ್ರಾಥಮಿಕ ತಪಾಸಣೆಯಿಂದ 11,824 ಮಕ್ಕಳನ್ನು ಸಂಭಾವ್ಯ ಮಾತು ಮತ್ತು ಶ್ರವಣ ಸಮಸ್ಯೆ ಇರಬಹುದೆಂದು ಗುರುತಿಸಲಾಗಿದೆ. ದ್ವಿತೀಯ ಹಂತದ ಪರೀಕ್ಷೆ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆಸಲಾಗಿದ್ದು, ಚಾಮರಾಜನಗರ ತಾಲೂಕಿನಲ್ಲಿಯೂ ಮುಂದುವರೆದಿದೆ. ಇತರೆ ತಾಲೂಕುಗಳಲ್ಲಿಯೂ ಎರಡನೇ ಹಂತದ ತಪಾಸಣೆ ನಡೆಯಲಿದೆ ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಆರಂಭವಾಗಿರುವ ಪ್ರಯಾಸ್ ಕಾರ್ಯಕ್ರಮ ಇತರೆ ಜಿಲ್ಲೆಗಳಿಗೂ ಮಾದರಿ ಯಾಗುವಂತಿದ್ದು, ರಾಜ್ಯಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಮಕ್ಕಳಿಗಷ್ಟೇ ಅಲ್ಲದೇ ಹಿರಿಯ ನಾಗರಿಕರಿಗೂ ಪ್ರಯಾಸ್ ಕಾರ್ಯಕ್ರಮ ವಿಸ್ತರಿಸಲು ಯೋಜಿಸಲಾಗಿದೆ. ಶ್ರವಣ ಮತ್ತು ಮಾತಿನ ಸಮಸ್ಯೆಗಳನ್ನು ಪರಿಹರಿಸಿ ಶ್ರವಣ ಹಾಗೂ ವಾಕ್ ಸಮಸ್ಯೆ ಮುಕ್ತ ಜಿಲ್ಲೆಯನ್ನಾಗಿಸುವುದು ನಮ್ಮ ಮುಂದಿನ ಗುರಿಯಾಗಿದೆ ಎಂದರು.

ಪ್ರಯಾಸ್ ಕಾರ್ಯಕ್ರಮಕ್ಕೆ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ನೆರವು ನೀಡುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಲು ರೋಟರಿ ಕ್ಲಬ್ ಆಫ್ ಮೈಸೂರು ವೆಸ್ಟ್ ಸಹಾಯ ಮಾಡುತ್ತಿದೆ. ಆಟೋಮೇಟಿವ್ ಆಕ್ಸಲ್ಸ್ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳ ಸಿಎಸ್‌ಆರ್ ನೆರವಿನಿಂದ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಈ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ಶಿಲ್ಪಾ ನಾಗ್ ತಿಳಿಸಿದರು.

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಪ್ರಭಾರ ನಿರ್ದೇಶಕರಾದ ಡಾ. ಮಂಜುಳ ಮಾತನಾಡಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ವಿಶೇಷ ಆಸಕ್ತಿ ಮತ್ತು ಕಾಳಜಿಯಿಂದ ಬಹುಶಃ ದೇಶದಲ್ಲಿಯೇ ಪ್ರಯಾಸ್ ನಂತಹ ಕರ‍್ಯಕ್ರಮ ಅನುಷ್ಠಾನವಾಗುತ್ತಿರುವುದು ಮೊದಲು ಎನಿಸಿದೆ. ಯೋಜನಾ ಬದ್ಧವಾಗಿ ಜಿಲ್ಲೆಯಲ್ಲಿ ಮಕ್ಕಳ ಮಾತು ಮತ್ತು ಕಿವಿ ಆರೋಗ್ಯ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುವ ಕಾರ್ಯಕ್ರಮ ಯಸಸ್ವಿಯಾಗಿ ನಡೆಯುತ್ತಿದೆ. ಪೂರ್ವ ಸಿದ್ಧತೆಯೊಂದಿಗೆ ಆರಂಭವಾಗಿರುವ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ಮಾಡಿದರು.

ಇದೇ ವೇಳೆ ಪ್ರಯಾಸ್ ಯೋಜನೆಗೆ ನೆರವು ನೀಡುತ್ತಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವೈದ್ಯರು, ಸಿಎಸ್ಆರ್ ಅಡಿ ಆರ್ಥಿಕ ಸಹಾಯ ಒದಗಿಸುತ್ತಿರುವ ಸಿಎಸ್‌ಆರ್ ಪ್ರತಿನಿಧಿಗಳಾದ ರೋಟರಿ ಕ್ಲಬ್ ಆಫ್ ಮೈಸೂರು ವೆಸ್ಟ್ ನ ದೇವರಾಜ್, ರುದ್ರೇಶ್, ಷಡಕ್ಷರಸ್ವಾಮಿ, ಕಿರಣ್ ರಾಜ್‌, ಸ್ಯಾಂ ಚೆರಿಯನ್, ಆಟೋಮೆಟಿಕ್ ಆಕ್ಸೆಲ್‌ನ ದಯಾನಂದ್ ಬಿ.ಜಿ. ಇನ್ನಿತರರನ್ನು ಸನ್ಮಾನಿಸಿ ಪ್ರಮಾಣ ಪತ್ರಗಳನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ವಿ. ಚಂದ್ರು, ಸಿಇಒ ಮೋನಾ ರೋತ್ ವಿತರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಪ್ರೊ. ಡಾ. ಎಂ. ಸಂದೀಪ್, ಡಾ ಪ್ರೀತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಮಂಜುನಾಥ, ಕಾರ್ಯಕ್ರಮ ಸಂಯೋಜಕರಾದ ಶಿವಸ್ವಾಮಿ, ಸಿಎಸ್‌ಆರ್ ಸಮಾಲೋಚಕರಾದ ರಕ್ಷಿತಾ, ಇತರರು ಉಪಸ್ಥಿತರಿದ್ದರು. ---------------

16ಸಿಎಚ್‌ಎನ್‌58

ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಅಂಗನವಾಡಿ ಮಕ್ಕಳ ವಾಕ್ ಮತ್ತ ಶ್ರವಣ ದ್ವಿತೀಯ ಹಂತದ ತಪಾಸಣಾ ಹಾಗೂ ಪ್ರಯಾಸ್ ಕಾರ್ಯಕ್ರಮಕ್ಕೆ ನೆರವು ನೀಡುತ್ತಿರುವ ಸಂಸ್ಥೆಗಳಿಗೆ ಕೃತಜ್ಞತೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅವರು ಮಾತನಾಡಿದರು.