ಸಾರಾಂಶ
ಶಿರಸಿ: ಮಾತು, ಮನಸ್ಸು, ಪ್ರಾಣಗಳಿಗೆ ಸಂಸ್ಕಾರ ನೀಡುವುದರಿಂದ ಇಹ ಹಾಗೂ ಪರದಲ್ಲಿ ಸುಖ ಸಿಗಲಿದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಸ್ವರ್ಣವಲ್ಲೀಯಲ್ಲಿ ಸಂಕಲ್ಪಿತ ತಮ್ಮ ೩೪ನೇ ಹಾಗೂ ತಮ್ಮ ಶಿಷ್ಯರಾದ ಕಿರಿಯ ಸ್ವಾಮೀಜಿ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯ ಪ್ರಥಮ ಚಾತುರ್ಮಾಸ ವ್ರತಾಚರಣೆಯಲ್ಲಿ ಶಿರಸಿ ಸೀಮೆಯ ತೋರಣಸಿ ಹಾಗೂ ಒಳಭಾಗಿಯ ಶಿಷ್ಯರ ಸೇವೆ ಸ್ವೀಕರಿಸಿ, ಆಶೀರ್ವಚನ ನೀಡಿದರು.ಬದುಕಿನಲ್ಲಿ ಒಳ್ಳೆಯದಾಗಬೇಕು ಹಾಗೂ ಪರದಲ್ಲಿ ಸದ್ಗತಿ ದೊರೆಯಬೇಕು ಎಂಬುದಾಗಿ ಎಲ್ಲರೂ ಬಯಸುತ್ತಾರೆ. ಇವೆರಡಕ್ಕೂ ಮನಸ್ಸು, ಮಾತು, ಪ್ರಾಣ ಇವುಗಳಿಗೆ ಸಂಸ್ಕಾರ ಕೊಡುವುದರ ಮೂಲಕ ಸಾಧಿಸಿಕೊಳ್ಳಬೇಕು. ಇವು ಮೂರು ತುಂಬಾ ಸೂಕ್ಷ್ಮವಾದವು. ಇವುಗಳನ್ನು ಚೆನ್ನಾಗಿ ಸಂಸ್ಕಾರಕ್ಕೆ ಒಳಪಡಿಸಿದರೆ ಇಹದಲ್ಲಿ ಚೆನ್ನಾಗಿ ಇರಲು ಸಾಧ್ಯ ಹಾಗೂ ಪರದಲ್ಲಿ ಸದ್ಗತಿ ಪಡೆಯಲು ಸಾಧ್ಯ. ಈ ಮೂರೂ ನಮ್ಮ ಜತೆಯಲ್ಲೇ ಎಷ್ಟೋ ಅನಾದಿ ಕಾಲದಿಂದ ನಮ್ಮ ಜತೆಯಲ್ಲೇ ಇವೆ. ಮುಂದೆ ಮೋಕ್ಷ ಎನ್ನುವ ಸ್ಥಿತಿಯನ್ನು ಪಡೆಯುವವರೆಗೂ ನಮ್ಮ ಜತೆಯಲ್ಲಿಯೇ ಇರುತ್ತವೆ. ಆದ್ದರಿಂದ ಇವುಗಳ ಹಿಡಿತದಲ್ಲಿ ನಮ್ಮ ಅಭ್ಯುದಯ ಹಾಗೂ ನಮ್ಮ ಸದ್ಗತಿ ಇದೆ. ಮನಸ್ಸು, ಮಾತು, ಪ್ರಾಣಗಳನ್ನು ಉತ್ತಮ ಸಂಸ್ಕಾರಕ್ಕೆ ಒಳಪಡಿಸಿದರೆ ನಮ್ಮ ಒಳ್ಳೆಯ ಬದುಕಿಗೆ ಕಾರಣವಾಗುತ್ತದೆ ಎಂದರು.ಸೂಕ್ಷ್ಮ ಸ್ಥಿತಿ ಇರುವ ಮಾತಿಗೆ ಸರಿಯಾದ ಸಂಸ್ಕಾರ ಕೊಡಬೇಕು. ಮಾತಿಗೆ ಉತ್ತಮ ಸಂಸ್ಕಾರ ಸಿಗಲು ಮೌನ ಉತ್ತಮ ಸಾಧನ. ಪ್ರತಿ ಒಂದು ತಿಂಗಳಿಗೊಮ್ಮೆ ಆದರೂ ಮೌನವನ್ನು ಮಾಡಬೇಕು. ಮೃದುವಾಗಿ ಹಾಗೂ ಸತ್ಯವಾದ ಮಾತನ್ನು ಆಡಬೇಕು. ಭಗವಂತ ಮಾತುಗಳನ್ನು ಹೇಗೆ ಆಡಬೇಕು ಎಂದು ವಿವರಿಸುವಾಗ ಈ ಅಂಶಗಳನ್ನು ಎತ್ತಿ ಹೇಳಿದ್ದಾನೆ. ದೇವರ ನಾಮ ಜಪ, ಭಜನೆ, ಸ್ತೋತ್ರ, ಇವುಗಳನ್ನು ಹೇಳುತ್ತಾ ನಮ್ಮ ಮಾತುಗಳನ್ನು ಅವುಗಳಲ್ಲಿಯೇ ತೊಡಗಿಸಬೇಕು. ಅದು ಈ ಮಾತಿಗೆ ಕೊಡುವ ಸಂಸ್ಕಾರವಾಗುತ್ತದೆ ಎಂದರು.ಸೀಮೆಯ ಮಾತೆಯರು ಮತ್ತು ಮಹನೀಯರು ಶ್ರೀಮಠಕ್ಕೆ ಆಗಮಿಸಿ ಅತ್ಯಂತ ಶ್ರದ್ಧಾ- ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿದರು. ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆಯನ್ನು ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನವನ್ನು ಕೈಗೊಂಡರು. ಈ ಸಂದರ್ಭದಲ್ಲಿ ಸೀಮೆಯ ಪ್ರಮುಖ ಶ್ರೀಪಾದ ಹೆಗಡೆ ಸಣ್ಣಳ್ಳಿ, ಗುರುಪಾದ ಹೆಗಡೆ ಹಲಸಿನಹಳ್ಳಿ, ನರಸಿಂಹ ದೀಕ್ಷಿತ ಕಳವೆ, ಉದಯ ಹೆಗಡೆ ಮುಂಡಿಗೆಸರ ಉಪಸ್ಥಿತರಿದ್ದರು.