ನಾವು ಆಡುವ ಮಾತುಗಳು ಇತರರಿಗೆ ನೋವುಂಟು ಮಾಡುವಂತಿರಬಾರದು. ಅದಕ್ಕಿಂತ ಮಿಗಿಲಾಗಿ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವಂತೆ ಇರಬಾರದು. ಮಾತು ಬೆಣ್ಣೆಯಲ್ಲಿ ಕೂದಲು ತೆಗೆದಂತಿರಬೇಕು ಎಂಬ ಮಾತೊಂದಿದೆ. ಕಠೋರ ಸತ್ಯವನ್ನು ಕೇಳುವವರಿಗೆ ಹಿತವಾಗುವಂತೆ ಹೇಳುವುದೂ ಒಂದು ಕಲೆ.

ಕನ್ನಡಪ್ರಭ ವಾರ್ತೆ ಸುತ್ತೂರು

ಆಡುವ ಮಾತು, ಹಿತ-ಮಿತ ಹಾಗೂ ಮೃದುವಾಗಿರಬೇಕು ಎಂದು ಮೈಸೂರು ಜೆಎಸ್‌ಎಸ್ ಕಾಲೇಜಿನ ಪ್ರಾಧ್ಯಾಪಕ ಎಚ್.ಬಿ. ದೇವಣ್ಣ ಹೇಳಿದರು.

ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶ್ರಾವಣಮಾಸದ 19ನೇ ದಿನದ ಪ್ರವಚನ ನೀಡುತ್ತ ಅವರು ತಿಳಿಸಿದರು.

ನಾವು ಆಡುವ ಮಾತುಗಳು ಇತರರಿಗೆ ನೋವುಂಟು ಮಾಡುವಂತಿರಬಾರದು. ಅದಕ್ಕಿಂತ ಮಿಗಿಲಾಗಿ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವಂತೆ ಇರಬಾರದು. ಮಾತು ಬೆಣ್ಣೆಯಲ್ಲಿ ಕೂದಲು ತೆಗೆದಂತಿರಬೇಕು ಎಂಬ ಮಾತೊಂದಿದೆ. ಕಠೋರ ಸತ್ಯವನ್ನು ಕೇಳುವವರಿಗೆ ಹಿತವಾಗುವಂತೆ ಹೇಳುವುದೂ ಒಂದು ಕಲೆ. ಗುರುಗಳ ಮಾತು ಕೇಳಿ ಅನೇಕ ಶಿಷ್ಯರು ತಮ್ಮ ಜೀವನ ವಿಧಾನವನ್ನು ಬದಲಾಯಿಸಿಕೊಂಡವರುಂಟು. ಗುರುಗಳ ನಡೆ-ನುಡಿಯನ್ನು ನೋಡಿ ಸಹಸ್ರಾರು ಮಂದಿ ಮನ: ಪರಿವರ್ತನೆ ಮಾಡಿಕೊಂಡಿರುವುದುಂಟು ಎಂದರು.

ಮಾತಿನಿಂದ ನಗೆ, ಮಾತಿನಿಂದ ಹಗೆ ಎನ್ನುತ್ತಾರೆ ಸರ್ವಜ್ಞ ಕವಿ. ನುಡಿದರೆ ಮುತ್ತಿನ ಹಾರದಂತಿರಬೇಕು ಎನ್ನುತ್ತಾರೆ ಶರಣರು. ಕೆಟ್ಟ ನುಡಿಯಿಂದ ಯಾರಿಗೂ ಒಳಿತಾಗುವುದಿಲ್ಲ ಎಂಬುದನ್ನು ಇತಿಹಾಸದ ಉದ್ದಕ್ಕೂ ಕಾಣಬಹುದು. ಭೋಜರಾಜನು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಳ್ಳುತ್ತಾನೆ. ಆಗ ಸಂಬಂಧಿಯಾದ ಮುಂಜ, ಭೋಜನನ್ನು ಕೊಲ್ಲಿಸಲು ಹವಣಿಸಿ ಕಟುಕರೊಂದಿಗೆ ಕಾಡಿಗೆ ಕಳುಹಿಸುತ್ತಾನೆ. ಆದರೆ ಭೋಜನ ಮುಖ ಸೌಂದರ್ಯಕ್ಕೆ ಮಾರುಹೋದ ಕಟುಕರು ಅವನನ್ನು ಕೊಲ್ಲದೆ ಕಾಡಿನಲ್ಲಿ ಬಿಟ್ಟು ಹಿಂತಿರುಗುತ್ತಾರೆ. ಆಗ ಭೋಜನು ಬರೆದು ಕಳುಹಿಸಿದ ಓಲೆಯೊಂದನ್ನು ಓದಿ ಮುಂಜನ ಮನಃ ಪರಿವರ್ತನೆಯಾಗಿ, ಭೋಜನನ್ನು ಕಾಡಿನಿಂದ ಕರೆಸಿ ಪಟ್ಟಾಧಿಕಾರ ಮಾಡಿ ಭೋಜನನ್ನೇ ರಾಜನನ್ನಾಗಿ ಮಾಡುತ್ತಾನೆ ಎಂದರು.

ಭೂಲೋಕದಲ್ಲಿ ವಿಟಪುರುಷನೆಂದೇ ಖ್ಯಾತನಾಗಿದ್ದ ಶ್ವೇತನು, ಗಣಿಕ ಮಣಿಯಾದ ರಂಭೆಯ ಉಪದೇಶವನ್ನು ಕೇಳಿ ಶಿವನನ್ನು ಆರಾಧಿಸುವ ಮೂಲಕ ಶಿವಭಕ್ತನಾಗುತ್ತಾನೆ. ತನ್ಮೂಲಕ ತನಗೆ ಬಂದಿದ್ದ ಸಂಕಷ್ಟಗಳಿಂದ ಮುಕ್ತನಾಗುವ ಗುರುಭಕ್ತಾಂಡ ಕಥೆಯನ್ನು ನಿರೂಪಿಸಿದರು. ಷಡಕ್ಷರಿ ಮತ್ತು ಶಿಕ್ಷಕ ವೃಂದ, ಎನ್. ಸಾಂಭವ, ಎನ್.ಎಸ್. ಸವಿತಾ, ಶಿವಲಿಂಗಮ್ಮ ಮತ್ತು ಮಕ್ಕಳು ಸೇವಾರ್ಥ ನೆರವೇರಿಸಿದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಭಕ್ತಾದಿಗಳು ಮತ್ತು ಆಧ್ಯಾತ್ಮಿಕ ಜಿಜ್ಞಾಸುಗಳು ಪಾಲ್ಗೊಂಡಿದ್ದರು.