ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪುರಸಭೆ ಅಧ್ಯಕ್ಷರು ತುರ್ತು ಗಮನ ಹರಿಸಿ ಕುಂಟಿತಗೊಂಡಿರುವ ಇ-ಸ್ವತ್ತು ಮಾಡಿಕೊಡುವ ಕೆಲಸಕ್ಕೆ ಚುರುಕು ನೀಡಬೇಕು. ಸಾಮಾನ್ಯರ ನಿವೇಶನಗಳು ಹಾಗೂ ಮನೆಗಳ ಇ-ಸ್ವತ್ತು ಮಾಡಿಸಿಕೊಡುವ ಕಾರ್ಯ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು.ಪಟ್ಟಣದ ಶಹರಿ ರೋಜ್ ಗಾರ್ ಭವನದಲ್ಲಿ ಪಂಕಜ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಟ್ಟಣದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ, ಹೇಮಾವತಿ ಬಡಾವಣೆಯ ನಿವೇಶನಗಳು ಹಾಗೂ ಮನೆಗಳ ಖಾತೆಗಳನ್ನು ಮಾಡಿ ಇ-ಸ್ವತ್ತು ನೀಡಬೇಕೆಂದು ರಾಜ್ಯ ಸರ್ಕಾರವೇ ಆದೇಶ ಹೊರಡಿಸಿದ್ದರೂ ನೌಕರರ ಬೇಜವಾಬ್ದಾರಿಯಿಂದ ಕುಂಠಿತವಾಗಿದೆ ಎಂದರು.
ಹೇಮಾವತಿ ಬಡಾವಣೆಯ ನಿವೇಶನಗಳ ಇ-ಸ್ವತ್ತು ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಸದಸ್ಯರು ಅಕ್ರಮ- ಸಕ್ರಮ ಯೋಜನೆಯಡಿ ಹೇಮಾವತಿ ಬಡಾವಣೆಯ 1276 ನಿವೇಶನಗಳ ಪೈಕಿ 694 ನಿವೇಶನಗಳನ್ನು ರಾಜ್ಯ ಸರ್ಕರ ವಿಶಾಲ ತಳಹದಿಯ ಮೇಲೆ ಸಕ್ರಮಗೊಳಿಸಿ ಆದೇಶ ಮಾಡಿದೆ ಎಂದರು.ಉಳಿದ 582 ನಿವೇಶನಗಳ ಸಕ್ರಮಾತಿ ಪ್ರಕರಣ ಬಾಕಿಯಿದೆ. ರಾಜ್ಯ ಸರ್ಕಾರ 694 ನಿವೇಶನಗಳನ್ನು ಸಕ್ರಮಗೊಳಿಸಿ ಎರಡು ವರ್ಷಗಳು ಕಳೆದಿದ್ದರೂ ಪುರಸಭೆ ಅರ್ಹ ನಿವೇಶನುದಾರ ಆಸ್ತಿಯನ್ನು ಇ-ಸ್ವತ್ತು ಮಾಡಲು ವಿಳಂಬ ನೀತಿ ಅನುಸರಿಸುತ್ತಿದೆ. ಅಧ್ಯಕ್ಷರು ಈ ಬಗ್ಗೆ ಗಮನ ಹರಿಸಿ ಇ-ಸ್ವತ್ತು ಕಾರ್ಯಕ್ಕೆ ಕ್ರಮ ವಹಿಸುವಂತೆ ಸದಸ್ಯರು ಮನವಿ ಮಾಡಿದರು.
ಪುರಸಭಾ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳನ್ನು ಹಾಲಿ ಬಾಡಿಗೆಯಲ್ಲಿರುವ ವರ್ತಕರಿಗೆ ಮುಂದುವರೆಸಲು ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಪುರಸಭೆ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಬಗ್ಗೆ ಸಾರ್ವಜನಿಕ ಒತ್ತಡವಿದೆ. ಈ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ನಟರಾಜು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಮಾಡಲು ಸದಸ್ಯರು ಸಹಕರಿಸಬೇಕು ಎಂದು ಕೋರಿದರು.ಇದಕ್ಕೆ ಪೂರಕವಾಗಿ ಚರ್ಚೆ ನಡೆಸಿದ ಸದಸ್ಯರಾದ ಬಸ್ ಸಂತೋಷ್ ಕುಮಾರ್, ಡಿ.ಪ್ರೇಮಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರಬಾಬು, ಮಹಾದೇವಿ ನಂಜುಂಡ ಮತ್ತಿತರರು ನಿಯಮಾವಳಿಯ ಪ್ರಕಾರ ಅಂಗಡಿ ಮಳಿಗೆಗಳು ಹರಾಜಾದರೂ ಪ್ರಸ್ತುತ ಬಾಡಿಗೆಗೆ ಪಡೆದಿರುವ ವರ್ತಕರಿಗೆ ಹರಾಜು ಬಿಡ್’ನ ಶೇ.5ರಷ್ಟು ಹೆಚ್ಚು ಬಾಡಿಗೆ ಕಟ್ಟಿಸಿಕೊಂಡು ಅವರನ್ನೇ ಮುಂದುವರೆಸಲು ಅವಕಾಶ ಇರುವುದರಿಂದ ಲೋಕೋಪಯೋಗಿ ಇಲಾಖೆ ನಿಯಮಾವಳಿಗೆ ಒಳಪಟ್ಟು ಹಾಲಿ ಬಾಡಿಗೆದಾರರನ್ನೇ ಮುಂದುವರೆಸೋಣ ಎಂದರು.
ಇದಕ್ಕೆ ಪೂರಕವಾಗಿ ರೂಲಿಂಗ್ ನೀಡಿದ ಅಧ್ಯಕ್ಷೆ ಪಂಕಜಾ ಅವರ ನಿರ್ಧಾರವನ್ನು ಸರ್ವಸದಸ್ಯರು ಸ್ವಾಗತಿಸಿದರು.ಪುರಸಭೆ ಪಟ್ಟಣದ ಸಮಗ್ರ ಗುರಿಯನ್ನು ಮುಖ್ಯವಾಗಿಟ್ಟುಕೊಂಡು ಜನಪರ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಬೇಕು. ಕಳೆದ ಆರು ತಿಂಗಳಿನಿಂದ ಪಟ್ಟಣದ ಅಭಿವೃದ್ಧಿ ಕುಂಠಿತ, ಜಡ್ಡುಗಟ್ಟಿರುವ ಪುರಸಭೆ ಆಡಳಿತಕ್ಕೆ ಕಾಯಕಲ್ಪ ನೀಡಲು ಪ್ರೇಮಕುಮಾರ್ ಆಗ್ರಹಿಸಿದರು.
ಹೊಸದಾಗಿ 100 ಎಲ್ ಇಡಿ ದೀಪಗಳನ್ನು ಖರೀದಿಸಿ ಅವಶ್ಯಕತೆ ಇರುವ ಕಡೆಗೆ ಬೀದಿ ದೀಪಗಳನ್ನು ಹೊಸದಾಗಿ ಕಟ್ಟಿಸುವುದು, 3 ಕೋಟಿ ರು.ವೆಚ್ಚದಲ್ಲಿ ಟೆಂಡರ್ ಕರೆಯಲಾಗಿರುವ ಕೆಲಸಗಳನ್ನು ತುರ್ತಾಗಿ ಆರಂಭಿಸುವುದು ಸೇರಿದಂತೆ ಅವಶ್ಯಕತೆ ಇರುವ ಕಡೆಗೆ ಕಾಮಗಾರಿ ನಡೆಸಲು ನಿರ್ಧರಿಸಲಾಯಿತು.ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಪಂಕಜಾಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ಸದಸ್ಯರಾದ ಎಚ್.ಆರ್.ಲೋಕೇಶ್, ಇಂದ್ರಾಣಿ, ಕಲ್ಪನಾದೇವರಾಜು, ಶುಭಾಗಿರೀಶ್, ಶಾಮಿಯಾನತಿಮ್ಮೇಗೌಡ ಮತ್ತಿತರರು ಭಾಗವಹಿಸಿದ್ದರು.