ಸಾರಾಂಶ
ರೈಲ್ವೇ ಯೋಜನೆಯ ಭೂಸ್ವಾದೀನ, ಯೋಜನಾ ವೆಚ್ಚಕ್ಕೆ ಸಂಬಂಧಿಸಿದಂತೆ ರಾಜ್ಯದ ಪಾಲಿನ ಹಣವನ್ನು ಸರ್ಕಾರ ಈಗಾಗಲೇ ಬಿಡುಗಡೆಗೊಳಿಸಿ ಅಗತ್ಯ ನೆರವು ಒದಗಿಸಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಕಾಲಮಿತಿಯೊಳಗೆ ವಿತರಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿವಮೊಗ್ಗ : ರೈಲ್ವೇ ಯೋಜನೆಯ ಭೂಸ್ವಾದೀನ, ಯೋಜನಾ ವೆಚ್ಚಕ್ಕೆ ಸಂಬಂಧಿಸಿದಂತೆ ರಾಜ್ಯದ ಪಾಲಿನ ಹಣವನ್ನು ಸರ್ಕಾರ ಈಗಾಗಲೇ ಬಿಡುಗಡೆಗೊಳಿಸಿ ಅಗತ್ಯ ನೆರವು ಒದಗಿಸಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಕಾಲಮಿತಿಯೊಳಗೆ ನಿಯಮಾನುಸಾರ ಬಾದಿತ ರೈತರಿಗೆ ಪರಿಹಾರ ಧನ ವಿತರಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಶಿವಮೊಗ್ಗ - ಶಿಕಾರಿಪುರ –ರಾಣೆಬೆನ್ನೂರು ರೈಲ್ವೇ ಲೈನ್ ವಿಸ್ತರಣೆ, ಭೂಸ್ವಾದೀನ ಪ್ರಕ್ರಿಯೆ, ಪರಿಹಾರ ಧನ ವಿತರಣೆ, ರೈಲ್ವೇ ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ರೈಲ್ವೇ ಕಾಮಗಾರಿಗಳು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಹಕಾರವನ್ನು ಮರೆಯುವಂತಿಲ್ಲ.
ಅವರ ಸಹಕಾರದಿಂದ ರೈಲ್ವೇ ಯೋಜನೆಗಳಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ತರುವಲ್ಲಿ ಸಹಕಾರಿಯಾಗಿದೆ ಎಂದರು.
ಶಿಕಾರಿಪುರ-ರಾಣೇಬೆನ್ನೂರು ನೂತನ ರೈಲ್ವೇ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೊದಲ ಮತ್ತು ದ್ವಿತೀಯ ಹಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ನಿಗದಿಪಡಿಸಿದ ಕಾಲಮಿತಿಯೊಳಗಾಗಿ ನಿಯಮಾನುಸಾರ ಬಾಧಿತ ರೈತರಿಗೆ ಪರಿಹಾರಧನ ವಿತರಿಸಲು ಕ್ರಮ ಕೈಗೊಂಡು ಕೂಡಲೇ ವರದಿ ನೀಡುವಂತೆ ಸೂಚಿಸಿದರು.
ಉಷಾ ನರ್ಸಿಂಗ್ ಹೋಂ ವರ್ತುಲದಲ್ಲಿ ನಿರ್ಮಿಸಲಾಗಿರುವ ಮೇಲ್ಸೇತುವೆಯಲ್ಲಿ ಲೋಪವಾಗಿರುವುದು ಗಮನಕ್ಕೆ ಬಂದಿದೆ. ಮುಂದಿನ ಒಂದು ವಾರದೊಳಗೆ ಅದನ್ನು ಗುತ್ತಿಗೆದಾರರು ಸರಿಪಡಿಸಬೇಕು. ಅಲ್ಲದೇ ಸದರಿ ಮೇಲ್ಸೇತುವೆಗೆ ಇರುವ ಸಂಪರ್ಕ ರಸ್ತೆಯೂ ಸಹ ಮಹಾಹಾನಗರಪಾಲಿಕೆಯವರು ದುರಸ್ತಿಗೊಳಿಸಿ ಸರಿಪಡಿಸುವಂತೆ ತಾಕೀತು ಮಾಡಿದರು.
ಹೊಸ ರೈಲ್ವೇ ಮಾರ್ಗದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕೆಲವು ರೈತರಿಗೆ ಪರಿಹಾರ ಧನ ವಿತರಣೆಯಾಗದಿರುವ ಬಗ್ಗೆ ದೂರುಗಳಿದ್ದು, ಸಂಬಂಧಿಸಿದ ಅಧಿಕಾರಿಗಳು ರೈತರೊಂದಿಗೆ ಚರ್ಚಿಸಿ ಪರಿಹಾರಧನ ನೀಡಬೇಕು. ಎರಡನೇ ಹಂತದ ಕೆಲವು ಪ್ರದೇಶಗಳಲ್ಲಿ ಸ್ವಾದೀನಪಡಿಸಿಕೊಳ್ಳಲಾಗುತ್ತಿರುವ ಕೃಷಿ ಭೂಮಿಗೆ ದರ ನಿಗಧಿಪಡಿಸಬೇಕಾದ ಅಗತ್ಯವಿದ್ದು, ಕೂಡಲೇ ಪರಿಹಾರ ಧನವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ನೂತನ ರೈಲ್ವೇ ಮಾರ್ಗದಲ್ಲಿ ಬರುವ ಅರಣ್ಯ ಭೂಮಿ ಮತ್ತು ಖಾಸಗಿ ಭೂಮಿಯಲ್ಲಿ ಬರುವ ಮರಗಳನ್ನು ಗುತ್ತಿಗೆದಾರರು ನಿಯಮಾನುಸಾರ ಅರಣ್ಯ ಇಲಾಖೆ ಯ ಅಧಿಕಾರಿಗಳಿಂದ ಅನುಮತಿ ಪಡೆದು, ತೆರವುಗೊಳಿಸಬೇಕು. ಅಗತ್ಯವಿದ್ದಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖಾಧಿಕಾರಿಗಳು ಸಹಕಾರ ನೀಡುವಂತೆ ಅವರು ಸೂಚಿಸಿದರು.
ಭೂಸ್ವಾದೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಕೂಡಲೇ ಇಲಾಖಾ ಅಧಿಕಾರಿಗಳು ಪೂರ್ಣಗೊಳಿಸಬೇಕು. ಮೊದಲ ಹಂತದ ಮಾರ್ಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡು ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗಿದೆ. ಹಸ್ತಾಂತರಿಸಲಾದ ಭೂಮಿಯಲ್ಲಿ ಗುತ್ತಿಗೆದಾರ ರು ಕಾಮಗಾರಿಯನ್ನು ಆರಂಭಿಸಬೇಕು. ಅಲ್ಲದೇ ರೈತರು ಮತ್ತೆ ಕೃಷಿ ಚಟುವಟಿಕೆ ಆರಂಭಿಸಿ ಕಾಮಗಾರಿ ವಿಳಂಬಕ್ಕೆ ಕಾರಣವಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಶಿಕಾರಿಪುರ-ಶಿವಮೊಗ್ಗ ಮಾರ್ಗದಲ್ಲಿ 562 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಆ ಪೈಕಿ 421 ಎಕರೆ ಭೂಮಿಯನ್ನು ಈಗಾಗಲೇ ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗಿದೆ. 7.7ಎಕರೆ ಭೂಪ್ರದೇಶದ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸೂಚಿಸಲಾಗಿದೆ. ಉಳಿದಂತೆ ಇಟ್ಟಿಗೆಹಳ್ಳಿ ಹಾಗೂ ಸುತ್ತ ಮುತ್ತಲ ಪ್ರದೇಶದ ಮಾರ್ಗದಲ್ಲಿನ ಮರಗಳ ತೆರವು ಕಾರ್ಯದ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಬೇಕು. ತಿಮ್ಮಲಾಪುರ ಮತ್ತು ದೂಪದಹಳ್ಳಿಯಲ್ಲಿನ ಮರಗಳ ತೆರವು ಕಾರ್ಯಕ್ಕೆ ಇಂದೇ ಆದೇಶ ಹೊರಡಿಸಲು ಸೂಚಿಸಲಾಗಿದೆ ಎಂದರು.
ಕಾರಿಪುರ ತಾಲೂಕಿನ ಎಳನೀರುಕೊಪ್ಪ ಗ್ರಾಮದಲ್ಲಿ ರೈಲ್ವೇ ಇಲಾಖೆಯವರು ನಿಗಧಿಪಡಿಸಿದ ಭೂಮಿಗಿಂತ ಹೆಚ್ಚಿನ ಭೂಪ್ರದೇಶ ವಶಕ್ಕೆ ಪಡೆದುಕೊಂಡಿರುವ ಬಗ್ಗೆ ದೂರುಗಳಿವೆ. ಕೂಡಲೇ ಸಂಬಂಧಿಸಿದ ಸರ್ವೇ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು.
ಎರಡನೇ ಹಂತದ ಭೂಸ್ವಾದೀನ ಪ್ರಕ್ರಿಯೆ ನಿರೀಕ್ಷಿತ ಪ್ರಗತಿ ಆಗಿಲ್ಲ. ಮುಂದಿನ ಎರಡು ತಿಂಗಳಲ್ಲಿ ರೈತರಿಗೆ ಪರಿಹಾರಧನ ಸಕಾಲದಲ್ಲಿ ಒದಗಿಸುವಂತೆ ಸೂಚಿಸಿ ದರು. ಕೆಲವು ಕಡೆ ಮಾರ್ಗ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಈಗಾಗಲೇ ಗುರುತಿಸಲಾದ ಮಾರ್ಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗುರುತಿಸಿರುವಂತೆಯೇ ಮುಂದುವರೆಯಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿ, ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ನಿಗದಿಪಡಿಸಿದ ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸಿ, ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಮೈಸೂರು ನೈಋತ್ಯ ರೈಲ್ವೇ ಡೆಪ್ಯೂಟಿ ಚೀಫ್ ಇಂಜಿನಿಯರ್ ಪ್ರದೀಪ್‍ಪುರಿ, ಮೂರ್ತಿರಾಜು, ವೂಟನ್, ಹರ್ಷವರ್ಧನ್, ಮಹಾನಗರಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ವಿಶೇಷ ಭೂಸ್ವಾಧೀನಾಧಿ ಕಾರಿ ನಜ್ಮಾಬಾನು, ಉಪವಿಭಾಗಾಧಿಕಾರಿ ಯತೀಶ್, ಪ್ರೊಬೇಷನರ್ ಐಎಎಸ್ ಅಧಿಕಾರಿ ದೃಷ್ಠಿ ಜೈಸ್ವಾಲ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.