ಸಾರಾಂಶ
ತಾಲೂಕಿನ ಚಿಂಪುಗಾನಹಳ್ಳಿಯಲ್ಲಿ ಆಕಸ್ಮಿಕ ಅಗ್ನಿ ಅವಘಡದಿಂದ ಏ.26 ರಂದು ಸುಮಾರು 10 ಗುಡಿಸಲು ಬೆಂಕಿಗೆ ಆಹುತಿಯಾಗಿದ್ದವು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ಚಿಂಪುಗಾನಹಳ್ಳಿಯಲ್ಲಿ ಆಕಸ್ಮಿಕ ಅಗ್ನಿ ಅವಘಡದಿಂದ ಏ.26 ರಂದು ಸುಮಾರು 10 ಗುಡಿಸಲು ಬೆಂಕಿಗೆ ಆಹುತಿಯಾಗಿದ್ದವು. ದಿನಬಳಕೆ ವಸ್ತುಗಳು, ಇತರೆ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ. ಆದ್ದರಿಂದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೀಘ್ರವೇ ಆಶ್ರಯ ಯೋಜನೆಯಡಿಯಲ್ಲಿ ಸಂತ್ರಸ್ಥರಿಗೆ ನಿವೇಶನ ಹಂಚಿಕೆ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.ಈ ಕುರಿತು ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ, ಗ್ರಾಪಂ ಅಧಿಕಾರಗಳ ನೇತೃತ್ವದ ತಂಡಯೊಂದಿಗೆ ಭೇಟಿ ನೀಡಿ ಮಾತನಾಡಿದರು. ಗೃಹ ಸಚಿವರ ಸೂಚನೆಯಂತೆ ತಾಪಂಗೆ 2 ಎಕರೆ ಸರ್ಕಾರಿ ಜಮೀನನ್ನು ಹಸ್ತಾಂತರ ಮಾಡಿ ಆಶ್ರಯ ಯೋಜನೆಯಡಿಯಲ್ಲಿ ಸಂತ್ರಸ್ಥರಿಗೆ ನಿವೇಶನವನ್ನು ಹಂಚಿಕೆ ಮಾಡುವಂತೆ ತಿಳಿಸಲಾಗಿದೆ ಎಂದರು. ನಗರ ಮತ್ತು ಯೋಜನಾ ಪ್ರಾಧಿಕಾರವು ಲೇಔಟ್ ಮಾಡಲು ಎಲ್ಲ ಸಿದ್ದತೆ ಮಾಡಿಕೊಳ್ಳುತ್ತಿದೆ. ಚುನಾವಣೆಯ ನೀತಿ ಸಂಹಿತೆ ಆದೇಶವು ಮುಗಿದ ಬಳಿಕ ಕೆಲಸವು ಪ್ರಾರಂಭವಾಗುತ್ತದೆ. ಗುಡಿಸಲಿನಲ್ಲಿದ್ದ ಆಧಾರ್ ಕಾರ್ಡ್, ರೇಷನ ಕಾರ್ಡ್ ದಾಖಲೆಗಳು ಸಂಪೂರ್ಣವಾಗಿ ಭಸ್ಮವಾಗಿದ್ದು, ಕೂಡಲೇ ಎಲ್ಲ ದಾಖಲೆಗಳನ್ನು ಮರು ಸೃಷ್ಠಿ ಮಾಡಿಕೊಡಲಾಗುವುದು. 9.32ಗುಂಟೆ ಸರ್ಕಾರಿ ಜಾಗದಲ್ಲಿ ನಿರಾಶ್ರಿತರಿಗೆ ನೀಡಿರುವ 2 ಎಕರೆ ಭೂಮಿಯನ್ನು ಹೊರತುಪಡಿಸಿ ಉಳಿದ ಜಾಗದಲ್ಲಿ ಶಾಲೆ, ಆಸ್ಪತ್ರೆ, ಆಟದ ಮೈದಾನ ಸೇರಿದಂತೆ ಇತರೆ ಸೌಲಭ್ಯವನ್ನು ನೀಡಲು ತಾಲೂಕು ಆಡಳಿತ ಸಿದ್ಧವಾಗಿದೆ ಎಂದು ಹೇಳಿದರು.