ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಸರಕಾರದ ವಿವಿಧ ಇಲಾಖೆಯ ವಿವಿಧ ಯೋಜನೆಗಳಡಿ ಪ್ರಗತಿಯಲ್ಲಿರುವ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕಾಲ ವಿಳಂಬ ಮಾಡದೆ ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.ಇಲ್ಲಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ನಾನಾ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಯೋಜನೆಗಳಡಿ ಅನುಷ್ಠಾನ ಮಾಡಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾದಗಿರಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶಿಕ್ಷಣ ಇಲಾಖೆಯ ಒಂಬತ್ತು ಶಾಲೆಗಳ ದುರಸ್ತಿ ಕಾರ್ಯ ಪ್ರಗತಿಯ ಹಂತದಲ್ಲಿದೆ. ಮಳೆಗಾಲ ಆರಂಭವಾಗಿದ್ದು, ಮಕ್ಕಳ ಅಭ್ಯಾಸಕ್ಕೆ ಸಮಸ್ಯೆಯಾಗದಂತೆ ವಿಳಂಬ ಮಾಡದೆ ಶೀಘ್ರವಾಗಿ ಶಾಲೆಗಳ ದುರಸ್ತಿ ಮಾವಡುವಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರು.ಗ್ರಾಮೀಣ ಸರಕಾರಿ ಶಾಲೆಗಳಿಗೆ ಅಗತ್ಯವಾದ ಶಾಲಾ ಕಾಂಪೌಂಡ್, ಶೌಚಾಲಯ, ಅಡುಗೆ ಕೋಣೆ ಹಾಗೂ ಆಟದ ಮೈದಾನಗಳ ಬೇಡಿಕೆ ಇರುವ ಶಾಲೆಗಳಿಗೆ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನ ಮಾಡುವ ಮೂಲಕ, ನಿರ್ಮಿಸಲು ಅಭಿವೃದ್ಧಿ ಅಧಿಕಾರಿಗಳಿಗೆ ಹೇಳಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಕಟಗೊಂಡ ಹತ್ತನೇ ತರಗತಿಯ ಫಲಿತಾಂಶವು ರಾಜ್ಯದಲ್ಲೆ ಅತೀ ಕಡಿಮೆಯಾಗಿದ್ದು, ಫಲಿತಾಂಶ ಕಡಿಮೆಗೆ ಕಾರಣಗಳೇನು ಎಂಬುದನ್ನು ಗುರುತಿಸಿ, ಸೂಕ್ತ ಪರಿಹಾರಕ್ಕೆ ಕ್ರಮವಹಿಸಿ, ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲವು ಅಂಗನವಾಡಿಗಳ ಮೇಲ್ಛಾವಣಿಗಳು ಮಳೆಗಾಲದಲ್ಲಿ ಸೊರುತ್ತಿವೆ, ಕುಡಿಯುವ ನೀರು, ಕಾಂಪೌಂಡ್ ದುರಸ್ತಿ ಮಾಡಿಕೊಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ಅನುಷ್ಟಾನ ಮಾಡಿದ ಕುಡಿಯುವ ನೀರಿನ ಕಾಮಗಾರಿಗಳು ಪೂರ್ಣಗೊಂಡ ನಂತರ ಎಲ್ಲಾ ಮನೆಗಳಿಗೆ ನೀರು ಬರುವದನ್ನು ಖಾತ್ರಿ ಪಡಿಸಿಕೊಂಡ ಬಳಿಕ ಗ್ರಾಮ ಪಂಚಾಯಿತಿ ಸುಪರ್ಧಿಗೆ ಪಡೆಯಬೇಕು ಎಂದರು.ಗುತ್ತಿಗೆದಾರರಿಂದ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ತೆಗೆದುಕೊಂಡು ಪ್ರಗತಿಯಲ್ಲಿರುವ ಕಾಮಗಾರಿ ಸ್ಥಳಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದರು.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್‌ನಲ್ಲಿ ಹಾಕುವ ಪ್ರತಿದಿನದ ಹಾಜರಾತಿ ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಪಿಡಿಒ ಅವರಿಗೆ ಸೂಚಿಸಿದರು.ಮಳೆಗಾಲ ಆರಂಭವಾಗಿದ್ದು, ಕುಡಿಯುವ ನೀರಿನ ಪೈಪ್‌ಗಳು ಒಡೆದು ನೀರು ಸೋರಿಕೆ ತಡೆಯಲು ಪೈಪ್ ಲೈನ್‌ಗಳನ್ನು ದುರಸ್ತಿ ಮಾಡಿ, ಹೂಳು ತುಂಬಿದ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ, ನಷ್ಟದ ಅಗತ್ಯ ಮಾಹಿತಿಯನ್ನು ಸಲ್ಲಿಸಲು ಸೂಕ್ರ ಕ್ರಮವಹಿಸಲು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಅನುದಾನದ ಕಾಮಗಾರಿಗಳನ್ನು ನಿರ್ವಹಿಸುವುದು ಅಗತ್ಯವಾದರೆ, ಕಾಮಗಾರಿಗಳ ಮಾಹಿತಿಯೊಂದಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.ವಡಗೇರಾ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಶರಬೈ, ಮಲ್ಲಿಕಾರ್ಜುನ್ ಸಂಗ್ವಾರ, ತಾಲೂಕು ಯೋಜನಾಧಿಕಾರಿ ಶಶಿಧರ ಹಿರೇಮಠ, ತಾಲೂಕು ಮಟ್ಟದ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ವ್ಯವಸ್ಥಾಪಕರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.