ಕಾಯಂ ಜನತಾ ನ್ಯಾಯಾಲಯದಿಂದ ಶೀಘ್ರ ನ್ಯಾಯ

| Published : Sep 03 2025, 01:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ಸಾಮಾನ್ಯ ಜನರ ದೂರುಗಳು ಆಡಳಿತದ ಮೆಟ್ಟಿಲಲ್ಲಿ ಬಗೆಹರಿಯದೇ ಉಳಿದಾಗ ಜನಸಾಮಾನ್ಯರಿಗೆ ತ್ವರಿತ ಹಾಗೂ ಕಡಿಮೆ ವೆಚ್ಚದಲ್ಲಿ ನ್ಯಾಯ ಒದಗಿಸಲು ಕಾಯಂ ಜನತಾ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ ಎಂದು ನ್ಯಾಯಾಧೀಶರಾದ ಸಚಿನ್ ಕೌಶಿಕ್‌ ಆರ್.ಎನ್. ಹೇಳಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ಸಾಮಾನ್ಯ ಜನರ ದೂರುಗಳು ಆಡಳಿತದ ಮೆಟ್ಟಿಲಲ್ಲಿ ಬಗೆಹರಿಯದೇ ಉಳಿದಾಗ ಜನಸಾಮಾನ್ಯರಿಗೆ ತ್ವರಿತ ಹಾಗೂ ಕಡಿಮೆ ವೆಚ್ಚದಲ್ಲಿ ನ್ಯಾಯ ಒದಗಿಸಲು ಕಾಯಂ ಜನತಾ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ ಎಂದು ನ್ಯಾಯಾಧೀಶರಾದ ಸಚಿನ್ ಕೌಶಿಕ್‌ ಆರ್.ಎನ್. ಹೇಳಿದರು.

ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡ ಕಾಯಂ ಜನತಾ ನ್ಯಾಯಾಲಯ ವಿಶೇಷ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಅನೇಕರಿಗೆ ಇನ್ನೂ ಜನತಾ ನ್ಯಾಯಾಲಯ ಕುರಿತು ಅರಿವು ಇಲ್ಲದಿರುವುದರಿಂದ ಗೊಂದಲ ಉಂಟಾಗಿದೆ. ಈ ನ್ಯಾಯಾಲಯದಲ್ಲಿ ಯಾವುದೇ ಶುಲ್ಕ ಕಟ್ಟಬೇಕಿಲ್ಲ. ವಕೀಲರ ಅವಶ್ಯಕತೆ ಇಲ್ಲ. ಅರ್ಜಿ ಸಲ್ಲಿಸಿದರೆ ಸಾಕು, ದಾವೆ ದಾಖಲಿಸಲಾಗುತ್ತದೆ. ಜನರಿಗೆ ಅಗತ್ಯವಾದ ಮೂಲ ಸೌಕರ್ಯಗಳ (ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ) ಕುರಿತು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಪರಿಹಾರ ಸಿಗದ ಸಂದರ್ಭಗಳಲ್ಲಿ ಜನತಾ ನ್ಯಾಯಾಲಯ ಸಂಪರ್ಕಿಸಬಹುದು ಎಂದು ಹೇಳಿದರು.

ಹಿರಿಯ ವಕೀಲ ಎಸ್.ಆರ್. ಸಜ್ಜನ ಮಾತನಾಡಿ, ದೌರ್ಜನ್ಯಕ್ಕೆ ಒಳಗಾದವರು ನ್ಯಾಯಕ್ಕಾಗಿ ಎಲ್ಲಿ ಹೋಗಬೇಕು ಎಂಬುದು ತಿಳಿಯದೇ ಸಂಕಷ್ಟ ಪಡುತ್ತಾರೆ. ಅನೇಕರು ನ್ಯಾಯಾಲಯಕ್ಕೂ ಬರುವುದಿಲ್ಲ. ಅಂತಹವರಿಗೆ ಶೀಘ್ರಪರಿಹಾರ ಸಿಗುವ ವೇದಿಕೆಯೇ ಜನತಾ ನ್ಯಾಯಾಲಯ. ದೀರ್ಘಕಾಲದ ಪ್ರಕರಣಗಳಿಗೆ ಇಲ್ಲಿ ಅವಕಾಶವಿಲ್ಲ. ತ್ವರಿತಗತಿಯಲ್ಲಿ ಪ್ರಕರಣ ಇತ್ಯರ್ಥಗೊಳಿಸುವುದೇ ಇದರ ಉದ್ದೇಶ. ತಾಲೂಕು ಮಟ್ಟದಲ್ಲಿ ಕಾನೂನು ಸೇವಾ ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಸಮಸ್ಯೆ ಮುಟ್ಟಿಸಿ ಪರಿಹಾರ ಪಡೆಯಬಹುದು. ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ ಜನರಿಗೆ ಶೀಘ್ರ ನ್ಯಾಯ ಒದಗಿಸುವ ಉದ್ದೇಶದಿಂದ ಕಾಯಂ ಜನತಾ ನ್ಯಾಯಾಲಯ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಮುದ್ದೇಬಿಹಾಳ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಮಾಲಗತ್ತಿ ಮಾತನಾಡಿ, ಭಾರತ ದೇಶದ ನ್ಯಾಯಾಲಯಗಳಲ್ಲಿ ಸುಮಾರು 5 ಕೋಟಿ ಪ್ರಕರಣ ಬಾಕಿ ಉಳಿದಿವೆ. ಪ್ರಕರಣ ಇತ್ಯರ್ಥವಾಗದಿರಲು ಹಲವಾರು ಕಾರಣಗಳಿವೆ. ಬಾಕಿ ಉಳಿದಿರುವ ಪ್ರಕರಣಗಳಿಗೆ ಪರ್ಯಾಯವಾಗಿ, ಕಾನೂನು ಸೇವಾ ಪ್ರಾಧಿಕಾರ ಮೂಲಕ ಸಮಾಲೋಚನೆ ಹಾಗೂ ಕಾಗದ ಪತ್ರದ ಆಧಾರದ ಮೇಲೆ ತ್ವರಿತವಾಗಿ ಪ್ರಕರಣ ಇತ್ಯರ್ಥಗೊಳಿಸಲು ಜನತಾ ನ್ಯಾಯಾಲಯ ಸೂಕ್ತ ವೇದಿಕೆ ಎಂದು ಹೇಳಿದರು.

ಮುದ್ದೇಬಿಹಾಳ ತಹಸೀಲ್ದಾರ ಕೀರ್ತಿ ಚಾಲಕ ಮಾತನಾಡಿ, ಜನತಾ ನ್ಯಾಯಾಲಯ ಅಂದರೆ ಜನರ ನ್ಯಾಯಾಲಯ. ಜನರಿಗೆ ಸುಲಭವಾಗಿ ಮತ್ತು ತ್ವರಿತವಾಗಿ ನ್ಯಾಯ ಸಿಗಲು ಇಂತಹ ವೇದಿಕೆ ಅತ್ಯಗತ್ಯ ಎಂದರು.ಎಚ್.ಎಲ್ ಸರೂರು ವಕೀಲರು ಮಾತನಾಡಿದರು, ಟಿ.ಡಿ. ಲಮಾಣಿ ನೀರೂಪಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಇಳಕಲ್, ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಸಿಒ ಈರಣ್ಣ ಕೊಣ್ಣೂರ, ಸದಸ್ಯರಾದ ಅಂಬ್ರಪ್ಪ ಶೀರಿ, ಸಂಗಣ್ಣ ಬಾರಡ್ಡಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಇತರರು ಇದ್ದರು.