ಕಲ್ಯಾಣ ಪಥ ಯೋಜನೆಗೆ ಶೀಘ್ರ ಚಾಲನೆ

| Published : Feb 18 2025, 12:30 AM IST

ಸಾರಾಂಶ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಗ್ರಾಮೀಣ ಸಂಪರ್ಕ ರಸ್ತೆಗಳ ಸುಧಾರಣೆ ಉದ್ದೇಶದ 1 ಸಾವಿರ ಕೋಟಿ ರು. ವೆಚ್ಚದ ಕಲ್ಯಾಮ ಪಥ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್‌ ತಿಳಿಸಿದರು.

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಗ್ರಾಮೀಣ ಸಂಪರ್ಕ ರಸ್ತೆಗಳ ಸುಧಾರಣೆ ಉದ್ದೇಶದ 1 ಸಾವಿರ ಕೋಟಿ ರು. ವೆಚ್ಚದ ಕಲ್ಯಾಮ ಪಥ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್‌ ತಿಳಿಸಿದರು.ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪಾಲು 330 ಕೋಟಿ ರು ಇದೆ. ಉಳಿದ ಹಣವನ್ನು ಆರ್‌ಡಿಪಿಆರ್‌ ಇಲಾಖೆ ಹೊಂದಿಸಲಿದೆ. ಇದರಿಂದ ಕಲ್ಯಾಣ ಭಾಗದ ರಸ್ತೆಗಳು ಹೊಸರೂಪ ತಾಳಲಿವೆ ಎಂದರು.ಈ ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿಗಳಿಗೆ ಆಹ್ವಾನಿಸಲಾಗುತ್ತಿದೆ. ಮಾ.2 ರಂದು ಅಥವಾ ಮೊದಲ ವಾರದಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ ಎಂದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಕೆಕೆಆರ್‌ಡಿಬಿ ಜಂಟಿ ಸಹಯೋಗದ ಈ ಕಲ್ಯಾಣ ಪಥ ಅಡಿಯಲ್ಲಿ ಕೈಗೊಳ್ಳಬಹುದಾದ ರಸ್ತೆ ಕಾಮಗಾರಿಗಳ ಪಟ್ಟಿ, ಕ್ರಿಯಾ ಯೋಜನೆ ಸಲ್ಲಿಸಲು ಈಗಾಗಲೇ ಕಲ್ಯಾಣ ಭಾಗದ ಎಲ್ಲಾ ಶಾಸಕರಿಗೆ ಕೋರಲಾಗಿದೆ ಎಂದು ತಿಳಿಸಿದರು.ಇದೇ ಮೊದಲ ಬಾರಿಗೆ ಕೆಕೆಆರ್‌ಡಿಬಿ ತನ್ನ ಅನುದಾನ 5 ಸಾವಿರ ಕೋಟಿ ರು. ಪೈಕಿ 3 ಸಾವಿರ ಕೋಟಿ ರು. ಹಣ ವೆಚ್ಚ ಮಾಡಿದೆ. ಇದಲ್ಲದೆ ಉಳಿದ 2 ಸಾವಿರ ಕೋಟಿ ರು. ಅನುದಾನಕ್ಕಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಇದೇ ಏಪ್ರಿಲ್‌ ಒಳಗಾಗಿ ಹೊಸ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆ ನೀಡಿ ಹೆಚ್ಚಿನ ಕಾಮಗಾರಿಗಳು ಆಗುವಂತೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.ಈ ಬಾರಿಯ ರಾಜ್ಯ ಮುಂಗಡ ಪತ್ರದಲ್ಲಿಯೂ ಮಂಡಳಿಗೆ 5 ಸಾವಿರ ಕೋಟಿ ರು. ಅನುದಾನ ಲಭ್ಯವಾಗಲಿದೆ. ಈಗಾಗಲೇ ಈ ಬಗ್ಗೆ ಬಜೆಟ್‌ ಪೂರ್ವ ಸಭೆ ನಡೆಸಿರುವ ಮುಖ್ಯಮಂತ್ರಿಗಳು ಮಂಡಳಿಯ ಕೆಲಸ ಕಾರ್ಯಗಳ ಮಾಹಿತಿ ಪಡೆದುಕೊಂಡಿದ್ದಾರೆ. ಮಂಡಳಿಯ ಅನುದಾನ, ಖರ್ಚು, ವೆಚ್ಚದ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ ಎಂದರು.ಕಲ್ಯಾಣದ 7 ಜಿಲ್ಲೆಗಳಲ್ಲಿ ಆಯ್ದ ಭಾಗಗಳಲ್ಲಿ 200 ಕೆಪಿಎಸ್‌ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಪ್ರತಿ ಶಾಲೆಗೆ 4 ಕೋಟಿ ರು ವೆಚ್ಚದಂತೆ 2 ಪಂಚಾಯ್ತಿಗಳ ನಡುವೆ ಕೆಪಿಎಸ್‌ ಶಾಲೆ ಆರಂಭಿಸಲಾಗುತ್ತಿದೆ. ಹಳ್ಳಿ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡುವುದೇ ಇದರ ಉದ್ದೇಶ. ಶಿಕ್ಷಕರ ನೇಮಕಾತಿ, ಸಂಪನ್ಮೂಲ ವ್ಯಕ್ತಿಗಳ ನೇಮಕ, ಮೂಲ ಸವಲತ್ತಿನ ಸೃಷ್ಟಿಗೆ ಸಿದ್ಧತೆ ಸಾಗಿದೆ ಎಂದರು.ಕೆಕೆಆರ್‌ಡಿಬಿಯಿಂದ ಅಲ್ಪಸಂಖ್ಯಾತರು, ಹಿಂದುಳಿದವರು, ಶೋಷಿತ ಸಮುದಾಯ ಸೇರಿದಂತೆ ಎಲ್ಲಾ ವರ್ಗದ ಪ್ರಗತಿಗೆ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಾಗುತ್ತಿದೆ. ಹಾರ್ಟ್‌ ಲೈನ್‌ ಯೋಜನೆಯಡಿ 50 ಅಂಬುಲನ್ಸ್‌ ಖರೀದಿ ಸಾಗಿದೆ ಎಂದು ಹೇಳಿದರು.