ಹಿರಿಯ ನಾಗರಿಕರನ್ನು ಒಂಟಿಯಾಗಿ ಬಿಡದೆ ಅವರೊಂದಿಗೆ ಮಾತನಾಡಬೇಕು. ಹಿರಿಯರೂ ಸಹ ತಮ್ಮ ಆರೋಗ್ಯದ ಕಡೆ ಗಮನಹರಿಸಿ ನಿಯಮಿತ ವ್ಯಾಯಾಮ, ಉತ್ತಮ ಆಹಾರ ಮತ್ತು ಶಿಸ್ತಿನ ಜೀವನಕ್ರಮವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಹಿರಿಯರೊಂದಿಗೆ ಪ್ರತಿದಿನ ಸಮಯ ಕಳೆಯುವ ಮೂಲಕ ಅವರಿಗೆ ಮಾನಸಿಕ ಧೈರ್ಯ ಒದಗಿಸುವುದು ಕಿರಿಯರ ಜವಾಬ್ದಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲೋಕೇಶ್ ಧನಪಾಲ ಹವಲೆ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರಿಗಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿರಿಯ ನಾಗರಿಕರು ಕುಟುಂಬ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆ ಹಾಗೂ ಅವರ ಜೀವನಾನುಭವವನ್ನು ನಾವೆಲ್ಲ ಗೌರವಿಸಬೇಕು. ತಮ್ಮ ತಂದೆ-ತಾಯಿ ಅಗತ್ಯಗಳನ್ನರಿತು ಸೇವೆ ಒದಗಿಸುವುದು ಮಕ್ಕಳ ಕರ್ತವ್ಯವೆಂದು ಹೇಳಿದರು.

ಹಿರಿಯ ನಾಗರಿಕರನ್ನು ಒಂಟಿಯಾಗಿ ಬಿಡದೆ ಅವರೊಂದಿಗೆ ಮಾತನಾಡಬೇಕು. ಹಿರಿಯರೂ ಸಹ ತಮ್ಮ ಆರೋಗ್ಯದ ಕಡೆ ಗಮನಹರಿಸಿ ನಿಯಮಿತ ವ್ಯಾಯಾಮ, ಉತ್ತಮ ಆಹಾರ ಮತ್ತು ಶಿಸ್ತಿನ ಜೀವನಕ್ರಮವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂದಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಿರಿಯನಾಗರಿಕರು ಮೊಬೈಲ್ ಹಾಗೂ ಡಿಜಿಟಲ್ ಸೇವೆಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಬ್ಯಾಂಕ್ ಖಾತೆ, ಎಟಿಎಂ, ಒಟಿಪಿ ಸೇರಿದಂತೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಅಪರಿಚಿತರಿಗೆ ನೀಡಬಾರದು ಎಂದು ತಿಳಿಸಿದರು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಿಲ್ಪ ಎಂ. ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ “ದೀರ್ಘಾಯುಷ್ಯದ ಯುಗ: ಸುದೀರ್ಘ ಜೀವನಕ್ಕಾಗಿ ಜೀವನ ಕ್ರಮಗಳ ಮರು ಚಿಂತನೆ” ಎಂಬ ಘೋಷವಾಕ್ಯದೊಂದಿಗೆ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹಿರಿಯನಾಗರಿಕರು ಜ್ಞಾನ, ಸಂಸ್ಕಾರ ಮತ್ತು ಅನುಭವಗಳ ಮಹಾಸಾಗರವಾಗಿದ್ದು, ಅವರ ಅನುಭವ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಹಿರಿಯನಾಗರಿಕರಿಗಾಗಿ ಸಹಾಯವಾಣಿ, ಹಗಲು ಯೋಗಕ್ಷೇಮ ಕೇಂದ್ರಗಳು, ಆರೋಗ್ಯ ತಪಾಸಣೆ, ಕಾನೂನು ನೆರವು ಹಾಗೂ ವೃದ್ಧಾಶ್ರಮ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಹಿರಿಯನಾಗರಿಕರು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ. ಸಿದ್ದರಾಮಣ್ಣ ಎಸ್., ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಬಾ.ಹಾ. ರಮಾಕುಮಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.