ದೇಗುಲ ಬದಲಾಗಿ ಶಾಲೆಗೆ ಹಣ ಖರ್ಚು ಮಾಡಿದರೆ ಸಾರ್ಥಕ: ಗುರುಮಹಾಂತ ಮಹಾಸ್ವಾಮೀಜಿ

| Published : Jan 29 2024, 01:32 AM IST

ಸಾರಾಂಶ

ಇಳಕಲ್ಲ: ಗುಡಿ-ಗುಂಡಾರಕ್ಕೆ ಸುಣ್ಣ ಬಣ್ಣ ಬಳೆದು ಸಿಂಗರಿಸುವ ಬದಲು, ಜೀವಂತ ದೇವರು ಇರುವ ಶಾಲೆಗಳಿಗೆ ಖರ್ಚು ಮಾಡಿ ಅಭಿವೃದ್ಧಿ ಮಾಡಿದರೆ ಸಾರ್ಥಕವಾಗುತ್ತದೆ ಎಂದು ಚಿತ್ತರಗಿ-ಇಳಕಲ್ಲ ಸಂಸ್ಥಾನ ಮಠದ ಪೀಠಾಧಿಪತಿ ಗುರುಮಹಾಂತ ಮಹಾಸ್ವಾಮೀಜಿ ಹೇಳಿದರು. ನಗರದ ಬಸವೇಶ್ವರ ಶಿಕ್ಷಣ ಸಮಿತಿ ನಡೆಸುತ್ತಿರುವ ಬಸವೇಶ್ವರ ಕನ್ನಡ ಮಾಧ್ಯಮ ಶಿಶುವಿಹಾರ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ೨೯ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಸವೇಶ್ವರ ಶಾಲೆಯಲ್ಲಿ ಶಿಕ್ಷಣ ಗುಣಮಟ್ಟ ಶ್ರೇಷ್ಠವಾದದ್ದು ಎಂದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಗುಡಿ-ಗುಂಡಾರಕ್ಕೆ ಸುಣ್ಣ ಬಣ್ಣ ಬಳೆದು ಸಿಂಗರಿಸುವ ಬದಲು, ಜೀವಂತ ದೇವರು ಇರುವ ಶಾಲೆಗಳಿಗೆ ಖರ್ಚು ಮಾಡಿ ಅಭಿವೃದ್ಧಿ ಮಾಡಿದರೆ ಸಾರ್ಥಕವಾಗುತ್ತದೆ ಎಂದು ಚಿತ್ತರಗಿ-ಇಳಕಲ್ಲ ಸಂಸ್ಥಾನ ಮಠದ ಪೀಠಾಧಿಪತಿ ಗುರುಮಹಾಂತ ಮಹಾಸ್ವಾಮೀಜಿ ಹೇಳಿದರು.

ನಗರದ ಬಸವೇಶ್ವರ ಶಿಕ್ಷಣ ಸಮಿತಿ ನಡೆಸುತ್ತಿರುವ ಬಸವೇಶ್ವರ ಕನ್ನಡ ಮಾಧ್ಯಮ ಶಿಶುವಿಹಾರ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ೨೯ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಸವೇಶ್ವರ ಶಾಲೆಯಲ್ಲಿ ಶಿಕ್ಷಣ ಗುಣಮಟ್ಟ ಶ್ರೇಷ್ಠವಾದದ್ದು ಎಂದರು.

ಮುಖ್ಯ ಅತಿಥಿಗಳಾಗಿ ಶ್ರೀ ಜಗದ್ಗುರು ಗಂಗಾಧರ ಮೂರುಸಾವಿರಮಠ ಕೈಗಾರಿಕಾ ತರಬೇತಿ ಕೇಂದ್ರದ ಹಿರಿಯ ತರಬೇತಿದಾರ ಮಂಜುನಾಥ ಬೆಳವಣಿಕಿ ಮಾತನಾಡಿ, ಬಸವೇಶ್ವರ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯದ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಎನ್ನುವುದು ಶ್ರೀಮಂತಿಕೆ ಇದ್ದಂತೆ. ಶಿಕ್ಷಣ ಕಲಿತರೆ ಎಲ್ಲಾದರೂ ಪಾರಾಗಿ ಬರಬಲ್ಲರು ಎಂದರು. ಮುಖ್ಯ ಅತಿಥಿಗಳಾಗಿ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ಹಂಚಾಟೆ ಮಾತನಾಡಿ, ಪ್ರಾರ್ಥಮಿಕ ಹಂತವೇ ವಿದ್ಯಾರ್ಥಿಗಳಿಗೆ ಬುನಾದಿ ಇದ್ದಂತೆ ವಾರ್ಷಿಕ ಸ್ನೇಹ ಸಮ್ಮೇಳನವೆಂದರೆ ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಹಬ್ಬ ಎಂದರು.

ಸಮಿತಿ ಕಾರ್ಯಧ್ಯಕ್ಷ ಮಲ್ಲಿಕಾರ್ಜುನ ಅಗ್ನಿ ಅಧ್ಯಕ್ಷತೆ ವಹಿಸಿದ್ದರು. ಬಸವೇಶ್ವರ ಶಾಲೆಯಲ್ಲಿ ಕಲಿತು ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗೌರವಿಸಿ ಸತ್ಕರಿಸಲಾಯಿತು. ಇನ್ಫೋಸಿಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಕಠಾರಿ, ಶಿಕ್ಷಕಿ ಕೀರ್ತಿ ಅಂಗಡಿ ಮತ್ತು ಅಂಬಿಕ ಕಾತರಿಕಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಶಾಲೆಗೆ ಧನಸಹಾಯ ಮಾಡಿದ ಆಯುರ್ವೇದ ವೈದ್ಯ ಮಹೇಶ ಹಂಚಾಟೆ ಅವರ ಧರ್ಮಪತ್ನಿ ರಾಜೇಶ್ವರಿ ಹಂಚಾಟೆ ಅವರನ್ನು ಸಮಿತಿಯ ಪರವಾಗಿ ಸತ್ಕರಿಸಲಾಯಿತು. ಸಮಿತಿ ಸದಸ್ಯರಾದ ಮಹಾಂತೇಶ ಗೊರಜನಾಳ, ಮಲ್ಲಿಕಾರ್ಜುನ ಅಂಗಡಿ, ಭರತ ಬೋರಾ, ಜಿಎಸ್. ಗೌಡರ ಬಿ.ಎಸ್. ಪಾಟೀಲ, ಎಚ್.ಎಸ್. ಮಾಲಿಪಾಟೀಲ, ಎಂ.ಐ. ಸುಳಿಭಾವಿ , ಬಿ.ಎಸ್. ಸಜ್ಜನ, ಸಂತೋಷ ಬಿಂಜವಾಡಿಗಿ ಇತರರು ವೇದಿಕೆಯಲ್ಲಿದ್ದರು .

ಶಾಲಾ ಶಿಕ್ಷಕರಿಂದ ವಚನ ಪ್ರಾರ್ಥನೆ, ಮುಖ್ಯಶಿಕ್ಷಕ ಸಿದ್ದು ಕೊಪ್ಪದ ಸ್ವಾಗತಿಸಿದರು, ಜಗದೀಶ ಹುನಗುಂದ ಪ್ರಾಸ್ತವಿಕವಾಗಿ ಮಾತನಾಡಿದರು, ಪಿ.ಎಸ್. ಕೊಣ್ಣೂರ ಪರಿಚಯಿಸಿದರು, ಶೋಭಾ ಮುಳ್ಳೂರ ವರದಿ ವಾಚನ ಮಂಡಿಸಿದರು, ಜ್ಯೋತಿ ಚಲವಾದಿ ನಿರೂಪಿಸಿದರು, ಎಲ್.ಎಸ್ . ಬಿಂಜವಾಡಿಗಿ ವಂದಿಸಿದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ ಮನರಂಜಿಸಿದವು.