ಸಂಸಾರದ ಜಂಜಾಟಗಳ ನಡುವೆಯೂ ಭಕ್ತಿ ಮತ್ತು ಸಹನೆಯಿಂದ ಅಧ್ಯಾತ್ಮದ ಉತ್ತುಂಗಕ್ಕೇರಿದ ಹೇಮರೆಡ್ಡಿ ಮಲ್ಲಮ್ಮನವರ ಜೀವನ ಇಂದಿನ ಆಧುನಿಕ ಯುಗದ ಸ್ತ್ರೀಯರಿಗೆ ಹಾಗೂ ಸಮಾಜಕ್ಕೆ ದಾರಿದೀಪವಾಗಿದೆ.

ಕೊಪ್ಪಳ: ಆಧ್ಯಾತ್ಮದ ರತ್ನ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂದು ಸಿಂಧನೂರಿನ ನಿವೃತ್ತ ಶಿಕ್ಷಕ ಹಾಗೂ ಜಾನಪದ ಸಾಹಿತಿ ವೆಂಕನಗೌಡ ವಟಗಲ್ ಹೇಳಿದರು.

ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಸಂಯುಕ್ತಾಶ್ರಯದಲ್ಲಿ 604ನೇ ಜಯಂತಿ ಪ್ರಯುಕ್ತ ಜರುಗಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನ ಜಯಂತಿಯ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಗೌರವ ಅರ್ಪಿಸಿ ಮಾತನಾಡಿದ ಅವರು, ಸಂಸಾರದ ಜಂಜಾಟಗಳ ನಡುವೆಯೂ ಭಕ್ತಿ ಮತ್ತು ಸಹನೆಯಿಂದ ಅಧ್ಯಾತ್ಮದ ಉತ್ತುಂಗಕ್ಕೇರಿದ ಹೇಮರೆಡ್ಡಿ ಮಲ್ಲಮ್ಮನವರ ಜೀವನ ಇಂದಿನ ಆಧುನಿಕ ಯುಗದ ಸ್ತ್ರೀಯರಿಗೆ ಹಾಗೂ ಸಮಾಜಕ್ಕೆ ದಾರಿದೀಪವಾಗಿದೆ. ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ತಿಲಕ. ಇಂದಿನ ತಾಂತ್ರಿಕ ಯುಗದಲ್ಲಿ ಮನುಷ್ಯ ಸಣ್ಣಪುಟ್ಟ ಕಷ್ಟಗಳಿಗೂ ಧೃತಿಗೆಡುತ್ತಿದ್ದಾನೆ. ಅಂತಹ ಸಂದರ್ಭದಲ್ಲಿ ಮಲ್ಲಮ್ಮನವರ ಬದುಕು ನಮಗೆ ಸ್ಥಿತಪ್ರಜ್ಞೆ ಕಲಿಸುತ್ತದೆ. ಸ್ತ್ರೀ ಶಕ್ತಿಯ ಸಂಕೇತವಾಗಿರುವ ಅವರು, ಸಂಸಾರದಲ್ಲಿದ್ದುಕೊಂಡೇ ಆಧ್ಯಾತ್ಮದ ಉತ್ತುಂಗ ಹೇಗೆ ತಲುಪಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದು ಹೇಳಿದರು.

2025-26 ನೇ ಸಾಲಿನ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಕೊಪ್ಪಳದಿಂದ ರಕ್ತದಾನ ಶಿಬಿರ ಜರುಗಿತು.

ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ರೆಡ್ಡಿ ಸಮಾಜದ ಮುಖಂಡ ಜಗದೀಶಪ್ಪ, ಮಹಾಲಿಂಗಪ್ಪ, ಹೇಮರೆಡ್ಡಿ ಬಿಸರಳ್ಳಿ, ಕಾಶಿನಾಥ ರೆಡ್ಡಿ, ಶಂಕರಗೌಡ ಹಿರೇಗೌಡ್ರು, ಅಂಬರೀಶ್ ಪಾಟೀಲ್, ವೆಂಕರೆಡ್ಡಿ ವಕೀಲರು, ಶರಣಪ್ಪ ವಕೀಲರು, ಸುಭಾಷ್ ರೆಡ್ಡಿ, ಮಹಾಲಿಂಗ ಹರಿಕೇರಿ ಸೇರಿದಂತೆ ರೆಡ್ಡಿ ಸಮಾಜದವರಿದ್ದರು. ಯಮನೂರಪ್ಪ ಭಜಂತ್ರಿ ಕಲಾ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.