ಹಬ್ಬಗಳು ಕೇವಲ ಆಚರಣೆಗೆ ಸೀಮಿತವಾಗದೇ ಅದರಲ್ಲಿ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರನ್ನವರಾತ್ರಿ ಹಬ್ಬದಲ್ಲಿ ದೇವಿಯ ಆರಾಧನೆ ಮಾಡುವ ಮೂಲಕ ಬುದಕಿನಲ್ಲಿ ಹೊಸ ಚೈತನ್ಯ ಕಂಡುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಹಬ್ಬಗಳು ಕೇವಲ ಆಚರಣೆಗೆ ಸೀಮಿತವಾಗದೇ ಅದರಲ್ಲಿ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರನ್ನವರಾತ್ರಿ ಹಬ್ಬದಲ್ಲಿ ದೇವಿಯ ಆರಾಧನೆ ಮಾಡುವ ಮೂಲಕ ಬುದಕಿನಲ್ಲಿ ಹೊಸ ಚೈತನ್ಯ ಕಂಡುಕೊಳ್ಳಬೇಕು ಎಂದು ಅಕ್ಕನ ಬಳಗದ ಗೌರವಾಧ್ಯಕ್ಷೆ ಸಂಯುಕ್ತ ಬಂಡಿ ಹೇಳಿದರು.

ಪಟ್ಟಣದ ಚಂದ್ರಮೌಳೇಶ್ವರ ದೇವಸ್ಥಾನದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಹಾಗೂ ಎಲ್ಲ ಸಮಾಜದ ಮಹಿಳಾ ಮಂಡಳದ ವತಿಯಿಂದ ಶರನ್ನವರಾತ್ರಿ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೆಮ್ಮದಿಯ ಬದುಕಿಗೆ ಆಧ್ಯಾತ್ಮ ಜ್ಞಾನ ಅಗತ್ಯ. ಕ್ಷಣಿಕ ಸುಖದ ಭೌತಿಕತೆಗಿಂತ, ಶಾಶ್ವತ ನೆಮ್ಮದಿ ನೀಡುವ ಆಧ್ಯಾತ್ಮ ಜ್ಞಾನಕ್ಕೆ ಆದ್ಯತೆ ನೀಡಬೇಕು. ಧರ್ಮವೇ ಭಾರತದ ಆತ್ಮ. ಧರ್ಮವೆಂದರೆ ವ್ಯಕ್ತಿ, ಸಮಷ್ಟಿಯ ಉನ್ನತಿಯ ಕಾಮನೆಗಾಗಿ ರೂಪುಗೊಂಡ ಜೀವನವಿಧಾನ. ಇದೇ ಜೀವನವಿಧಾನದ ಮೂಲಕ ಜ್ಞಾನ, ವಿಜ್ಞಾನದ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದವರು ನಾವು. ಈ ಭೂಮಿಯಲ್ಲಿ ಯಾವುದು ಶಾಶ್ವತವಲ್ಲ, ಎಲ್ಲವು ಒಂದು ದಿನ ನಶಿಸಿ ಹೋಗುತ್ತದೆ. ಅದರಲ್ಲಿ ಉಳಿವುದೊಂದೆ ಜೀವಾತ್ಮ ಅದನ್ನು ಸದಾ ಸಂತೋಷವಾಗಿಡುವ ಏಕೈಕ ಅಸ್ತ್ರವೆಂದರೆ ಅದೇ ಆಧ್ಯಾತ್ಮ. ನಾಗರೀಕತೆ, ಸಂಸ್ಕೃತಿ, ಆಧ್ಯಾತ್ಮ ಈ ಮೂರು ಅಂಶಗಳು ಪ್ರತಿ ಮಾನವನಲ್ಲಿಯೂ ಇದ್ದಾಗ ಮಾತ್ರ ಜೀವನ ಪರಿಪೂರ್ಣವಾಗಲಿದೆ ಎಂದರು.

ಮಂಜುಳಾ ರೇವಡಿ ಮಾತನಾಡಿ, ನವರಾತ್ರಿ ಹಬ್ಬವು ದುಷ್ಟಶಕ್ತಿಗಳ ವಿರುದ್ಧ ದೈವಿಕ ವಿಜಯವನ್ನು ಸಾರುವುದರ ಜೊತೆಗೆ ಸ್ತ್ರೀಶಕ್ತಿ ಮಹತ್ವವನ್ನು ಪ್ರತಿಪಾದಿಸುತ್ತದೆ ಎಂದ ಅವರು, ಆಧ್ಯಾತ್ಮ ಹಿಂದೆ, ಇಂದು ಹಾಗೂ ಮುಂದೆಯೂ ಹಾಗೆ ಇರುತ್ತದೆ ಆದರೆ, ನಮ್ಮ ಸಾಮಾಜಿಕ ಚಿಂತನೆಗಳು ಮಾತ್ರ ಬದಲಾಗುತ್ತಿವೆ. ನೆಮ್ಮದಿಗೆ ಉತ್ತಮ ಮಾರ್ಗವೆಂದರೆ ಆಧ್ಯಾತ್ಮ ಮಾತ್ರ ಎಂದರು. ಈ ವೇಳೆ ಕವಿತಾ ಜಾಲಿಹಾಳ, ಗಿರೀಜಾ ಬಳಿಗೇರ, ಲೀಲಾ ಸವಣೂರ, ರೇಖಾ ಚೋಳಿನ, ಲಕ್ಷ್ಮೀ ಮೆಣಿಸಿನಕಾಯಿ, ಪುಷ್ಪಾ ಚೋಳಿನ, ರೂಪಾ ರಾಜೂರ, ದಾನಮ್ಮ ಪಟ್ಟೇದ, ಅನುಷಾ ಬಂಡಿ, ಗೀತಾ ವಾಲಿ, ಶ್ರೀಮತಿ ಜೋಳದ ಸೇರಿದಂತೆ ಇತರರು ಇದ್ದರು.