ಸಾರಾಂಶ
ನರಗುಂದ: 12ನೇ ಶತಮಾನದಲ್ಲಿ ಬಸವಣ್ಣವರು ಹಲವಾರು ಶರಣರ ಮೂಲಕ ಸಾವಿರಾರು ವಚನಗಳನ್ನು ರಚಿಸಿ ಸಮಾಜದ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನ ಕು.ಪ್ರಭಕ್ಕನವರ ಹೇಳಿದರು.
ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಬಸವ ಕೇಂದ್ರದ ಆಶ್ರಯದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ, ನೆಮ್ಮದಿ ಜೀವನಕ್ಕೆ ಅಧ್ಯಾತ್ಮಿಕ ಜ್ಞಾನ ಅಗತ್ಯವಿದೆ. ಶರಣರ, ಸಂತರ ತತ್ವಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ಹೊಂದಬೇಕು ಎಂದರು.ಲಯನ್ಸ್ ಇಂಗ್ಲೀಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ,ಪ್ರವಚನಕಾರ ಗಿರೀಶ್ ಹಿರೇಮಠ ಮಾತನಾಡಿ, ಶರಣರು 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದರೆ, 20-21ನೇ ಶತಮಾನದಲ್ಲಿ ಪತ್ರಿಕೆಗಳು ಆ ಕೆಲಸ ನಿರ್ವಹಿಸುತ್ತಿವೆ. ಸುಸ್ಥಿರ ಸಮಾಜ ನಿರ್ಮಿಸುವುದರ ಜತೆಗೆ ಪತ್ರಿಕೆಗಳ ಜ್ಞಾನ ಸಂಗ್ರಹಕ್ಕೆ ಮೂಲಾಧಾರವಾಗಿವೆ ಎಂದರು.
ಇಂದಿನ ಇಂಟರ್‌ನೆಟ್ ಯುಗದಲ್ಲೂ ಪತ್ರಿಕೆಗಳು ಜನಮಾನಸದಲ್ಲಿ ನೆಲೆಸಿವೆ. ಇದಕ್ಕೆ ಅವು ನೀಡುತ್ತಿರುವ ವರ್ತಮಾನ ಸುದ್ದಿಯ ಜತೆಗೆ ಎಲ್ಲ ಕ್ಷೇತ್ರದ ಜ್ಞಾನ ಒದಗಿಸುತ್ತಿರುವುದೇ ಆಗಿದೆ. ಆದರೆ ಮುದ್ರಣ ಮಾಧ್ಯಮ ಅನೇಕ ಸವಾಲು ಎದುರಿಸುತ್ತಿದೆ. ವಿದ್ಯುನ್ಮಾನ ಮಾಧ್ಯಮಗಳ ನಡುವೆಯೂ ವಿಶ್ವಾಸಾರ್ಹ ಸುದ್ದಿ ನೀಡುತ್ತಿವೆ. ಆದ್ದರಿಂದ ಪತ್ರಿಕೆಗಳನ್ನು ಕೊಂಡು ಓದಬೇಕಿದೆ. ಮಕ್ಕಳಿಗೆ ಪತ್ರಿಕೆಗಳ ಮಹತ್ವ ತಿಳಿಸಿ ಅದರ ಓದಿಗೆ ತೊಡಗಿಸಬೇಕಿದೆ, ಶರಣ ಸಂಗಮದಲ್ಲಿ ನೀಡಿದ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶ್ರೀಮುರುಘರಾಜೇಂದ್ರ ಟ್ರಸ್ಟ್ ನಿರ್ದೇಶಕ ವಿ.ಎನ್. ಕೊಳ್ಳಿ ಮಾತನಾಡಿ, ಅಧ್ಯಾತ್ಮ ಪರಂಪರೆಯಲ್ಲಿರುವ ನಾವು ಅದರ ಭಾಗವಾಗಬೇಕು. ಸಜ್ಜನರ ಸಹವಾಸದ ಮೂಲಕ ಶಾಂತಿಯ ಬದುಕು ನಡೆಸಬೇಕು. ಬಸವಾದಿ ಶರಣರ ತತ್ವ ಅಳವಡಿಸಿಕೊಂಡು ಜೀವನ ಪಾವನವಾಗಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಬಸವ ಕೇಂದ್ರ ಅಧ್ಯಕ್ಷ ಚನ್ನಬಸಪ್ಪ ಕಂಠಿ, ಸಿ.ಎಚ್. ಕೋರಿ, ಶಂಕ್ರಣ್ಣ ವಾಳದ, ಎಸ್.ವೈ. ಹುಂಬಿ, ಜಂಗಣ್ಣವರ ಹಾಗೂ ಬಸವ ಕೇಂದ್ರ ಹಾಗೂ ಮುರಘರಾಜೇಂದ್ರ ಟ್ರಸ್ಟ್ ಪದಾಧಿಕಾರಿಗಳು ಇದ್ದರು.ಪ್ರೊ.ಆರ್.ಬಿ. ಚಿನವಾಲರ ಸ್ವಾಗತಿಸಿದರು, ಪ್ರೊ.ಆರ್.ಎಚ್. ತಿಗಡಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.