ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಇಂದಿನ ಆಧುನಿಕ ಯುಗದಲ್ಲಿ ಮಾನವನ ಬದುಕು ಯಾಂತ್ರಿಕವಾಗಿದೆ. ಒತ್ತಡ, ಖಿನ್ನತೆಯಿಂದ ಮಾನವ ಜರ್ಝರಿತನಾಗಿದ್ದಾನೆ. ಇದರಿಂದ ಹೊರಬರಲು ಆಧ್ಯಾತ್ಮಿಕ ಮಾರ್ಗ ಆಯ್ದುಕೊಳ್ಳಬೇಕು ಎಂದು ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ ಅಧ್ಯಕ್ಷ ಪಂ. ಗೋಪಾಲಾಚಾರ್ಯ ಅಕಮಂಚಿ ಕವಿಮಾತು ಹೇಳಿದ್ದಾರೆ.ಇಲ್ಲಿನ ರಾಘವೇಂದ್ರ ಕಾಲೋನಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶ್ವಮಧ್ವ ಮಹಾಪರಿಷತ್ ಅಂಗ ಸಂಸ್ಥೆಯಾದ ನಗರದ ಹರಿದಾಸ ಸಾಹಿತ್ಯ ಪ್ರಚಾರವಾಹಿನಿಯ 23ನೇ ವಾರ್ಷಿಕೋತ್ಸವ , ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಜ್ಞಾನ-ಭಕ್ತಿ-ವೈರಾಗ್ಯವೇ ನಮ್ಮೆಲ್ಲರ ಗುರಿಯಾಗಬೇಕು. ಅಂದಾಗಲೇ ನೈಜ ಸುಖ, ಶಾಂತಿ-ನೆಮ್ಮದಿ ಪ್ರಾಪ್ತಿಯಾಗುತ್ತದೆ. ಇದನ್ನೇ ಹರಿದಾಸ ಸಾಹಿತ್ಯ ಪ್ರತಿಪಾದಿಸುತ್ತದೆ ಎಂದರು.
ಇದೇ ಸಮಾರಂಭದಲ್ಲಿ ಹಿರಿಯ ಪುರೋಹಿತರಾದ ದತ್ತಾಚಾರ್ಯ ಹೊಗಾಡೆ, ಸುರಪುರದ ಶಿಲಾಕುಮಾರ ಶಾಸ್ತ್ರಿ ಅವರಿಗೆ ವಿಪ್ರಶ್ರೀ , ನೇತ್ರತಜ್ಞ, ಲೇಖಕ ಡಾ. ಉದಯ ಪಾಟೀಲ (ಸಾಮಾಜಿಕ ಕ್ಷೇತ್ರ), ಚಿತ್ರಕಲಾವಿದ, ಗಾಯಕ ಹಳ್ಳೇರಾವ ಕುಲಕರ್ಣಿ ಕೆಂಭಾವಿ (ಶಿಕ್ಷಣ) ಹಾಗೂ ಪತ್ರಕರ್ತ ಶೇಷಗಿರಿ ಹುಣಸಗಿ (ಮಾಧ್ಯಮ ಕ್ಷೇತ್ರ) ಅವರಿಗೆ `ಜಗನ್ನಾಥ ವಿಠ್ಠಲ’ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಿದ್ಧಿಮಾರುತಿ ದೇವಸ್ಥಾನದ ಅರ್ಚಕರಾದ ಪಂ. ನಾರಾಯಣಾಚಾರ್ಯ ಕಮಲಾಪುರ, ಚಿತ್ತಾಪುರದ ಪ್ರಕಾಶ ಭಟ್ ಹಾಗೂ ಯುವ ಸಂಗೀತ ಕಲಾವಿದ ನಯನಕುಮಾರ್ ಎನ್. ಮಳಖೇಡಕರ್ ಅವರಿಗೆ ಗೌರವ ಸನ್ಮಾನ ನಡೆಯಿತು.
ದಿ. ಜಾನಕಿಬಾಯಿ ದೇಶಪಾಂಡೆ ಹುಣಸಗಿ ಸ್ಮರಣಾರ್ಥ 2023-24ನೇ ಸಾಲಿನ ಅತ್ಯುತ್ತಮ ಭಜನಾ ಮಂಡಳಿ ಪ್ರಶಸ್ತಿಯನ್ನು ಶ್ರೀ ಧ್ಯಾನಾಂಜನೇಯ ಭಜನಾ ಮಂಡಳಿಗೆ ವಿತರಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ವಾಹಿನಿಯ ಅಧ್ಯಕ್ಷರಾದ ಪಂ. ಗೋಪಾಲಾಚಾರ್ಯ ಅಕಮಂಚಿ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಖ್ಯಾತ ವಕೀಲರಾದ ರಾಘವೇಂದ್ರ ನಾಡಗೌಡರು ಹಾಗೂ ವಿಶ್ವಮಧ್ವ ಮಹಾಪರಿಷತ್ ಕಲಬುರಗಿ ಘಟಕದ ಅಧ್ಯಕ್ಷ ಡಿ.ಕೆ. ಕುಲಕರ್ಣಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಕಲ್ಯಾಣರಾವ ಬಕ್ಷಿ ವಕೀಲರು, ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್, ರಾಮಾಚಾರ್ಯ ಮೋಘರೆ, ಬಾಲಕೃಷ್ಣ ಲಾತೂರಕರ್, ರವಿ ಲಾತೂರಕರ್, ಬ್ರಾಹ್ಮಣ ಸಮಾಜದ ಪ್ರಮುಖರಾದ ವೀರೇಶ ಕುಲಕರ್ಣಿ, ರವೀಂದ್ರ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಇಂಜಿನಿಯರ್ ಮುರಳೀಧರ ಜಿ. ಕರಲಗಿಕರ್, ಹಿಂದೂ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ದಿನಕರರಾವ ನಾರಾಯಣರಾವ ಕುಲಕರ್ಣಿ ಅಷ್ಟಗಿ, ಲಕ್ಷ್ಮೀಕಾಂತ ಮೊಹರೀರ್, ಶೇಷಗಿರಿ ಎನ್. ಬೀಡಕರ್ ಇದ್ದರು.ಪ್ರೊ. ವ್ಯಾಸರಾಜ ಸಂತೆಕೆಲ್ಲೂರ ನಿರೂಪಿಸಿದರು. ಸಂಚಾಲಕ ಬೆಂಕಿ ಭೀಮಭಟ್ಟ ಮೋತಕಪಲ್ಲಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಶೋಭಾಯಾತ್ರೆ: ಪ್ರಶಸ್ತಿ ಪ್ರದಾನ ಸಮಾರಂಭದ ಮುನ್ನ ಬ್ರಹ್ಮಪುರ ಉತ್ತರಾದಿ ಮಠದಿಂದ ಶ್ರೀ ವೆಂಕಟೇಶ್ವರ ದೇವಸ್ಥಾನದವರೆಗೆ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸನ ಹಾಗೂ ದಾಸರ ಭಾವಚಿತ್ರದ ಶೋಭಾಯಾತ್ರೆ ನಡೆಯಿತು. ಹರಿದಾಸ ಸಾಹಿತ್ಯ ಪ್ರಚಾರವಾಹಿನಿಯ ಅಧ್ಯಕ್ಷ ಪಂ. ಗೋಪಾಲಾಚಾರ್ಯ ಅಕಮಂಚಿ, ಉಪಾಧ್ಯಕ್ಷ ಪ್ರೊ. ವ್ಯಾಸರಾಜ ಸಂತೆಕೆಲ್ಲೂರ, ಸಂಚಾಲಕ ಭೀಮಭಟ್ಟ ಬೆಂಕಿ ಮೋತಕಪಲ್ಲಿ ಉಸ್ತುವಾರಿಯಲ್ಲಿ ವಿವಿಧ ಭಜನಾ ಮಂಡಳಿಗಳ ನೂರಾರು ಸದಸ್ಯೆಯರು ಪಾಲ್ಗೊಂಡು ಹರಿನಾಮ ಭಜನೆ ಮಾಡಿದರು.