ಸಾರಾಂಶ
ಮನುಷ್ಯ ಜೀವನ ಸಾರ್ಥಕತೆಗೆ ಅಧ್ಯಾತ್ಮ ಅವಶ್ಯಕವಾಗಿದ್ದು ಭಗವದ್ಗೀತೆ ಸುಜ್ಞಾನದ ಆಗರವಾಗಿದೆ
ಬೀದರ್: ಮನುಷ್ಯ ಜೀವನ ಸಾರ್ಥಕತೆಗೆ ಅಧ್ಯಾತ್ಮ ಅವಶ್ಯಕವಾಗಿದ್ದು ಭಗವದ್ಗೀತೆ ಸುಜ್ಞಾನದ ಆಗರವಾಗಿದೆ ಎಂದು ಸಿಕಿಂದ್ರಾಬಾದ್‌ನ ಶ್ರೀಕೃಷ್ಣ ಚೈತನ್ಯದಾಸರು ಹೇಳಿದರು.
ಬೀದರ್ ಹೊರವಲಯದ ನೀಲಾಚಲ ಧಾಮದಲ್ಲಿ ಜಗನ್ನಾಥ ದೇವಸ್ಥಾನದ ಪ್ರತಿಷ್ಠಾಪನೆ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ದೇವರಿಗೆ ಏನನ್ನೂ ಮರೆಮಾಚಲು ಸಾಧ್ಯವಿಲ್ಲ. ಜಗನ್ನಾಥ ದೇವಸ್ಥಾನದ ಸ್ಥಾಪನೆಯಿಂದಾಗಿ ಬೀದರ್ ಇಸ್ಕಾನ್‌ನ ಜವಾಬ್ದಾರಿ ಹೆಚ್ಚಾಗಿದೆ. ಇಸ್ಕಾನ್ ವಿಶ್ವದಾದ್ಯಂತ ಕೃಷ್ಣ ಸಂದೇಶದ ಸ್ತುತ್ಯಾರ್ಹ ಕಾರ್ಯ ಮಾಡುತ್ತಿದೆ ಎಂದರು.ಸಮಸ್ತ ಜೀವರಾಶಿಗಳಲ್ಲಿ ಮನುಷ್ಯ ಜೀವಿಗೆ ಮೇರು ಸ್ಥಾನವಿದೆ, ಕಾರಣ ಮೋಕ್ಷ ಪ್ರಾಪ್ತಿಯ ಜ್ಞಾನ ಈ ಜನ್ಮದಲ್ಲಿ ಸಿಗುವುದರಿಂದ ಸದಾ ಜ್ಞಾನ ಪಿಪಾಸುವಾಗಿರಬೇಕು. ದೇವರ, ಆತ್ಮದ ಮತ್ತು ಅಧ್ಯಾತ್ಮದ ಜ್ಞಾನ ಪಡೆಯುತ್ತಾ ಸಾಗಬೇಕು. ಆಗಲೇ ಜನ್ಮಕ್ಕೆ ದಿಕ್ಕು ದೆಸೆ ಪ್ರಾಪ್ತವಾಗುತ್ತದೆ. ಹಾಗಾಗಿ ಈ ಜನ್ಮ ಹಾಳು ಮಾಡಿಕೊಳ್ಳದೆ ಮಹಾತ್ಮರ, ಯೋಗಿಗಳ ಜೀವನ ಬೋಧನೆ ಅನುಸರಣೆ ಮಾಡಬೇಕೆಂದರು.
ವೈದಿಕ ಧರ್ಮ, ಸನಾತನ ಧರ್ಮ ಇಹಪರದ ಕರಾರುವಕ್ಕಾದ ಜ್ಞಾನ ನೀಡುತ್ತದೆ. ಇದು ಋಷಿಮುನಿಗಳ ತಪಸ್ಸಿನಿಂದ ಪ್ರಾಪ್ತವಾಗಿದೆ ಎಂದರು.ಜಗನ್ನಾಥ ಮಂದಿರದ ಸ್ಥಾಪನೆಯಿಂದಾಗಿ ಬೀದರ್ ಇಸ್ಕಾನ್‌ನ ಜವಾಬ್ದಾರಿ ಹೆಚ್ಚಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಿ ಭವಿಷ್ಯದಲ್ಲಿ ಇಸ್ಕಾನ್‌ಗೆ ಮಹತ್ವದ ಸ್ಥಾನಮಾನ ಪ್ರಾಪ್ತವಾಗಲು ಪ್ರಯತ್ನಿಸಬೇಕು ಎಂದರು.
ಸಾಂಗಲಿಯ ಕೃಷ್ಣ ಮುಖೇಡಕರ್ ಹಾಗೂ ರಾಮುಲು ಗಾದಗಿ, ರಾಮಕೃಷ್ಣ ಸಾಳೆ ಅವರಿಂದ ಸಂಗೀತ ಹಾಗೂ ಸತ್ಯಪ್ರಕಾಶ, ಸ್ಪೂರ್ತಿ ಅಳ್ಳೆ, ಸಾನ್ವಿ ಅಳ್ಳೆ, ವೇದಾಂಶ ಹಲಮಂಡಗೆಯವರಿಂದ ಹನುಮಾನ್ ಚಾಲಿಸ ಪಠಣ, ವಿದ್ಯಾ ದೀಕ್ಷಿತ್‌ರವರಿಂದ ಕೃಷ್ಣ ಭಜನೆ, ಕೌಶಕಿ ಪಾಂಡುರವರಿಂದ ಕೃಷ್ಣ ನೃತ್ಯ ಸಂಪನ್ನಗೊಂಡವು.