ಬದುಕಿನ ಜಂಜಡಗಳಿಗೆ ಅಧ್ಯಾತ್ಮವೇ ಪರಿಹಾರ: ಭಾರತಿ ರಾಯಣ್ಣನವರ

| Published : Feb 28 2025, 12:53 AM IST

ಸಾರಾಂಶ

ಇಂದಿನ ಬದುಕಿನ ವಾಸ್ತವಿಕತೆಗಳನ್ನು, ಜಂಜಡಗಳನ್ನು ವಿಶ್ಲೇಷಿಸಿದಾಗ ಆಧ್ಯಾತ್ಮಿಕತೆಯೊಂದೇ ಎಲ್ಲದಕ್ಕೂ ಸರಳ ಪರಿಹಾರವಾಗಿದೆ

ಕುಮಟಾ: ಇಂದಿನ ಬದುಕಿನ ವಾಸ್ತವಿಕತೆಗಳನ್ನು, ಜಂಜಡಗಳನ್ನು ವಿಶ್ಲೇಷಿಸಿದಾಗ ಆಧ್ಯಾತ್ಮಿಕತೆಯೊಂದೇ ಎಲ್ಲದಕ್ಕೂ ಸರಳ ಪರಿಹಾರವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಭಾರತಿ ಶಿವಪುತ್ರ ರಾಯಣ್ಣನವರ ಹೇಳಿದರು.

ಪಟ್ಟಣದ ಕೋರ್ಟ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಕಾರ್ಯಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಆಕರ್ಷಣೆಯಾಗಿ ಸಾರ್ವಜನಿಕ ವೀಕ್ಷಣೆಗಾಗಿ ಅಮರನಾಥ ಶಿವಲಿಂಗ ದರ್ಶನ’ ಹಾಗೂ ಸಭಾ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಆಧುನಿಕತೆಯನ್ನು ಎಷ್ಟೇ ಅಪ್ಪಿಕೊಂಡಿದ್ದರೂ ಬದುಕಿನಲ್ಲಿ ಆಧ್ಯಾತ್ಮಿಕತೆಯನ್ನು ಬಿಡದೇ ಅನುಸರಿಸಿದರೆ ಮುಂದಿನ ತಲೆಮಾರು ಕೂಡ ನೈತಿಕತೆಯಂತಹ ಉನ್ನತ ಮೌಲ್ಯಗಳನ್ನು ಬದುಕಿನಲ್ಲಿ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಮಹಾಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯದ ಕುರಿತು ಬ್ರಹ್ಮಕುಮಾರಿ ಸರೋಜ ಮಾತನಾಡಿ, ಅಜ್ಞಾನದ ಅಂಧಕಾರವನ್ನು ಕಳೆದು ಆಧ್ಯಾತ್ಮಿಕ ಜ್ಞಾನದ ಪ್ರಖರ ಬೆಳಕನ್ನು ಬದುಕಿಗೆ ನೀಡುವುದೇ ಮಹಾಶಿವರಾತ್ರಿಯ ಒಳತಿರುಳಾಗಿದೆ. ಬದುಕಿನಲ್ಲಿ ಆಧ್ಯಾತ್ಮಿಕತೆಯ ಸಹಯೋಗದಿಂದ ಉನ್ನತ ಜೀವನ ಮೌಲ್ಯಗಳು ವ್ಯಕ್ತಿತ್ವದ ಭಾಗವಾಗುತ್ತದೆ ಎಂದರು.

ಬ್ರಹ್ಮಕುಮಾರಿ ಸಂಚಾಲಕಿ ಗೀತಾ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಸುಮತಿ ಭಟ್, ಸದಸ್ಯ ಎಂ.ಟಿ.ನಾಯ್ಕ ಮಾತನಾಡಿದರು.

ಸಿ.ಎಸ್.ನಾಯ್ಕ ಸ್ವಾಗತಿಸಿದರು. ಗೀತಾ ಬೈಲಕೇರಿ ನಿರೂಪಿಸಿ ವಂದಿಸಿದರು. ಫೆ.೨೭ರವರೆಗೂ ಅಮರನಾಥ ಶಿವಲಿಂಗ ದರ್ಶನಕ್ಕೆ ಅವಕಾಶ ಇರಲಿದೆ.