ರಾಮ ಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಏಕೆ: ಪದ್ಮರಾಜ್‌

| Published : Jan 04 2024, 01:45 AM IST

ರಾಮ ಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಏಕೆ: ಪದ್ಮರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಮಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಬೆರೆಸಿ ಮಾತನಾಡುತ್ತಿರುವುದು ಏಕೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಮಂಗಳೂರಿನಲ್ಲಿ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮ ಮಂದಿರ ಲೋಕಾರ್ಪಣೆ ಹೆಮ್ಮೆಯ, ಸಂತೋಷದ ವಿಚಾರ. ಆದರೆ ಶ್ರದ್ಧಾ ಭಕ್ತಿಯಿಂದ ಆಚರಿಸಬೇಕಾದ ಈ ಕಾರ್ಯಕ್ರಮವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸುತ್ತಿರುವ ಔಚಿತ್ಯವೇನು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಇದ್ದ ಅಯೋಧ್ಯೆ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾದ ಬಳಿಕ ಕೋರ್ಟ್‌ ಆದೇಶ ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಆ ಹಿನ್ನೆಲೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಇದರಲ್ಲಿ‌ ರಾಜಕೀಯ ಮಾಡುವುದು ಖೇದಕರ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ 31 ವರ್ಷ ಹಿಂದೆ ನಡೆದಿದ್ದ ಗಲಭೆ ಪ್ರಕರಣದ ಇಬ್ಬರನ್ನು ಬಂಧಿಸಿರುವ ವಿಚಾರದಲ್ಲಿ ಬಿಜೆಪಿಯವರು ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಆ ಇಬ್ಬರ ಮೇಲಿನ ಕ್ರಿಮಿನಲ್‌ ಪ್ರಕರಣವನ್ನು ಎಲ್‌ಪಿಸಿ (ಲಾಂಗ್ ಪೆಂಡಿಂಗ್ ಕೇಸ್) ಅಂತ ಇಡಲಾಗಿತ್ತು. ನ್ಯಾಯಾಲಯದ ಆಜ್ಞೆ ಪ್ರಕಾರ, ವಾರಂಟ್ ಇರುವಾಗ ಬಂಧಿಸಲಾಗಿದೆ. ಇದರಲ್ಲಿ ರಾಜಕೀಯ ಮಾಡುವುದು ಎಲ್ಲಿಂದ ಬಂತು? ಬಿಜೆಪಿ ಸರ್ಕಾರ ಇದ್ದಾಗ ಆ ಪ್ರಕರಣಗಳನ್ನು ಯಾಕೆ ಇತ್ಯರ್ಥಪಡಿಸಿಲ್ಲ? ಬಿಜೆಪಿ ನಾಯಕರಿಗೆ ಕಾನೂನಿನ ಕನಿಷ್ಠ ಸಾಮಾನ್ಯ ಜ್ಞಾನ ಇರಬೇಕು ಎಂದರು.

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ರಾಜ್ಯದ ಹಿಂದೂಗಳಿಗೆ ಬಹಳಷ್ಟು ಅನುಕೂಲ ಆಗಿದೆ.‌ ಶಬರಿಮಲೆಗೆ ವಿಶೇಷ ಬಸ್ ಸೌಕರ್ಯ, ಅರ್ಚಕರಿಗೆ ಗೌರವಧನ ಹೆಚ್ಚಳ, ಸಾಮೂಹಿಕ ವಿಮೆ, ದೀಪಾವಳಿ ವೇಳೆ ಗೋಪೂಜೆಗೆ ಆದೇಶ, ಕಾಶಿ ಹೋಗುವವರ ಸಹಾಯಧನ ಹೆಚ್ಚಳ ಮಾಡಲಾಗಿದೆ. ಇದೆಲ್ಲ ಬಿಜೆಪಿಯವರ ಕಣ್ಣಿಗೆ ಯಾಕೆ ಕಾಣಲ್ಲ ಎಂದು ಪದ್ಮರಾಜ್‌ ಆರ್‌. ಪ್ರಶ್ನಿಸಿದರು.

ಮಂಗಳೂರಲ್ಲಿ ಎಲ್ಲೆಡೆ ರಸ್ತೆ ಅಗೆದು ಹಾಕಿ ಸಂಪೂರ್ಣ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಸ್ಥಳೀಯ ಜನಪ್ರತಿನಿಧಿಗಳು ಮೊದಲು ಈ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಮುಖಂಡರಾದ ಸಂತೋಷ್‌ ಕುಮಾರ್‌ ಶೆಟ್ಟಿ, ಕೇಶವ ಮರೋಳಿ, ರಾಕೇಶ್‌ ದೇವಾಡಿಗ, ಶಾಂತಲಾ ಗಟ್ಟಿ, ಚಂದ್ರಕಲಾ, ಉದಯ ಆಚಾರಿ, ಚೇತನ್ ಕುಮಾರ್‌ ಮತ್ತಿತರರಿದ್ದರು.

ಬಿ.ಕೆ.ಹರಿಪ್ರಸಾದ್ ಮಾತು ಗಂಭೀರ ಪರಿಗಣನೆ ಬೇಕಾಗಿಲ್ಲ: ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್ ನಲ್ಲಿ ನಿರ್ಲಕ್ಷಕ್ಕೊಳಗಾಗಿರುವ ನಾಯಕ, ಅವರ ಪಕ್ಷದವರೇ ಅವರನ್ನು ಲೆಕ್ಕಕ್ಕಿಡದೆ, ಪಕ್ಕಕ್ಕಿಟ್ಟಿದ್ದಾರೆ. ಆದ್ದರಿಂದ ದೇಶದಲ್ಲಿ ಮತ್ತೇ ಗೋದ್ರಾ ಘಟನೆ ಆಗುತ್ತದೆ ಎಂದಿರುವ ಅವರು ಹೇಳಿಕೆಯನ್ನು ಇತರರು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಹೇಳಿಕೆ ಕೊಡುವ ಬಿ.ಕೆ. ಹರಿಪ್ರಸಾದ್ ಒಬ್ಬ ದೇಶದ್ರೋಹಿ, ಗೋದ್ರಾ ಹತ್ಯಾಕಾಂಡಕ್ಕೆ ಯಾರು ಕಾರಣ ಎಂದು ಮೊದಲು ವಿಮರ್ಶಿಸಲಿ, ಕಾಂಗ್ರೆಸ್ ನ ದೇಶ ವಿರೋಧಿ ಮನಃಸ್ಥಿತಿಯೇ ಗೋದ್ರಾ ಘಟನೆಗೆ ಕಾರಣ ಎಂದು ಯಶಪಾಲ್ ಹೇಳಿದರು.ಅಯೋಧ್ಯೆಗೆ ರಾಮಭಕ್ತರು ದೇಶಭಕ್ತರು ಬರಬೇಕು ಎಂದು ಕರೆ ಕೊಟ್ಟಿದ್ದೇವೆ. ಹರಿಪ್ರಪಸಾದ್ ಕೂಡ ಹಿಂದೂ ಆಗಿ ಬಂದರೆ ಮಾತ್ರ ಸ್ವಾಗತವಿದೆ. ಆದರೇ ದೇಶ ವಿರೋಧಿಗಳು ಬರುವುದು ಬೇಡ. ಹರಿಪ್ರಸಾದ್ ಪಾಕಿಸ್ತಾನಿ ಮನೋಭಾವನೆಯಲ್ಲಿ ಮಾತನಾಡಿದ್ದಾರೆ. ರಾಮ ಮಂದಿರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಹರಿಪ್ರಸಾದ್ ಗೆ ಇಲ್ಲ ಎಂದು ಯಶಪಾಲ್ ಹೇಳಿದರು.