ಸಾರಾಂಶ
ಗೃಹ ಸಚಿವ ಹಾಗೂ ದಲಿತ ಹಿರಿಯ ನಾಯಕ ಡಾ. ಜಿ. ಪರಮೇಶ್ವರ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ಹಾಗೂ ಐಟಿ ದಾಳಿ ನಡೆಸಿರುವುದು ದಲಿತ ರಾಜಕಾರಣಿಗಳ ಮೇಲೆ ಪ್ರಾಯೋಜಿತ ದಾಳಿಗಳಾಗಿವೆ.
ಕನ್ನಡಪ್ರಭ ವಾರ್ತೆ ಹೊಸಪೇಟೆ
ಗೃಹ ಸಚಿವ ಹಾಗೂ ದಲಿತ ಹಿರಿಯ ನಾಯಕ ಡಾ. ಜಿ. ಪರಮೇಶ್ವರ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ಹಾಗೂ ಐಟಿ ದಾಳಿ ನಡೆಸಿರುವುದು ದಲಿತ ರಾಜಕಾರಣಿಗಳ ಮೇಲೆ ಪ್ರಾಯೋಜಿತ ದಾಳಿಗಳಾಗಿವೆ ಎಂದು ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಬಣ್ಣದಮನೆ ಸೋಮಶೇಖರ ಖಂಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸುಸಂಸ್ಕೃತ ಕುಟುಂಬದಿಂದ ಬಂದಿರುವ ಪರಮೇಶ್ವರವರು ಯಾವ ಸಂದರ್ಭದಲ್ಲಿಯೂ ರಾಜಕಾರಣದ ಭಾಷೆಯನ್ನು ಬಳಸಿ ಉದ್ದಟತನದಿಂದ ಮಾತನಾಡಿದವರಲ್ಲ. ಸುಮಾರು 40 ವರ್ಷಗಳಿಂದ ರಾಜಕೀಯದಲ್ಲಿರುವ ಇವರು ಕರ್ನಾಟಕದ ಉಪ ಮುಖ್ಯಮಂತ್ರಿಗಳಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರೇಷ್ಮೆ ಇಲಾಖೆಯಿಂದ ಮೊದಲ್ಗೊಂಡು ಇಂದಿನ ಗೃಹ ಇಲಾಖೆಯವರೆಗೂ ವಿವಿಧ ಮಂತ್ರಿ ಮಂಡಲಗಳಲ್ಲಿ ಅತ್ಯುನ್ನತ ಕೆಲಸ ನಿರ್ವಹಿಸಿರುವ ಇವರು ರಾಜಕಾರಣದಲ್ಲಿ ಕಳಂಕರಹಿತರು. ಶಿಕ್ಷಣ ಭೀಷ್ಮ ಎಂದು ಹೆಸರಾಗಿರುವ ಇವರ ತಂದೆ ಎಚ್.ಎಂ. ಗಂಗಾಧರಯ್ಯ ರವರು ಶತಶತಮಾನಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದವರ ಶಿಕ್ಷಣಕ್ಕೆ ಆದ್ಯತೆ ನೀಡಲು ಸಿದ್ದಾರ್ಥ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಇಂದು ಈ ಶಿಕ್ಷಣ ಸಂಸ್ಥೆ ಡೀಮ್ಡ್ ವಿಶ್ವವಿದ್ಯಾಲಯದ ಮಟ್ಟಕ್ಕೆ ಬೆಳೆದು ಲಕ್ಷಾಂತರ ಜನರ ವಿದ್ಯಾಭ್ಯಾಸಕ್ಕೆ ಮೆಟ್ಟಿಲಾಗಿದೆ. ಈಗ ಸಂಸ್ಥೆ ಮೇಲೆ ದಾಳಿ ನಡೆದಿರುವುದು ಖಂಡನೀಯ ಎಂದರು.
ಇಂತಹ ಶಿಕ್ಷಣ ಸಂಸ್ಥೆಯನ್ನು ರಾಜಕಾರಣದ ಹಿನ್ನೆಲೆಯಿಂದ ಜೊತೆಗೆ ಒಬ್ಬ ದಲಿತ ಸಮುದಾಯದವರ ಈ ಪ್ರಗತಿ ಸಹಿಸದ ಹಿನ್ನೆಲೆಯಲ್ಲಿ ಇಡಿ ಹಾಗೂ ಇನ್ನಿತರೆ ದಾಳಿಗಳಿಗೆ ನಿರಂತರವಾಗಿ ತುತ್ತಾಗುತ್ತಾ ಬಂದಿದ್ದಾರೆ. ದೇಶದಲ್ಲಿ ಸ್ವಾತಂತ್ರ‍್ಯ ನಂತರ ಹಾಗೂ ಇಂದಿನವರೆಗೂ ಹಲವಾರು ಶಿಕ್ಷಣ ಸಂಸ್ಥೆಗಳು ಉನ್ನತ ಜಾತಿಯವರ ಕೈಯಿಂದ ಸ್ಥಾಪನೆಗೊಂಡಿವೆ. ವಿಶ್ವವಿದ್ಯಾಲಯದ ಮಟ್ಟದ ಮಾನ್ಯತೆ ಪಡೆದುಕೊಂಡಿವೆ. ಆದರೆ ಅವುಗಳ ಮೇಲೆ ಯಾವ ದಾಳಿಯೂ ಈವರೆಗೂ ಆಗಿರುವ ನಿದರ್ಶನವಿಲ್ಲ. ಶತಶತಮಾನಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದವರ ಜನರಿಗಾಗಿಯೇ ಸ್ಥಾಪಿಸಿದ ಪ್ರಜ್ಞಾವಂತ ದಲಿತರ ಶಿಕ್ಷಣ ಸಂಸ್ಥೆ ಮೇಲೆ ಈ ರೀತಿಯ ದಾಳಿಯನ್ನು ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿರುವುದು ನಿಜಕ್ಕೂ ಖಂಡನಾರ್ಹ ಎಂದು ಬಣ್ಣದಮನೆ ಸೋಮಶೇಖರ ತಿಳಿಸಿದ್ದಾರೆ.