ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕ್ರೀಡೆ ಕೇವಲ ಒಂದು ದಿನದ ಚಟುವಟಿಕೆಯಾಗದೆ, ಅದು ದಿನನಿತ್ಯದ ಅವಿಭಾಜ್ಯ ಅಂಗವಾಗಬೇಕು ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಬಿಂದುರಾಣಿ.ಜಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕ್ರೀಡಾ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೧೮ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾಕೂಟದ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕ್ರೀಡೆ ದೇಹಕ್ಕೆ ಶಕ್ತಿ ನೀಡುವ ಜೊತೆಗೆ ಮನಸ್ಸಿಗೆ ಶಾಂತಿ ಮತ್ತು ಶಿಸ್ತನ್ನು ಒದಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ರೀಡೆಯು ಕ್ರೀಡಾ ವಿಜ್ಞಾನವಾಗಿ ವಿಸ್ತಾರಗೊಂಡಿದ್ದು, ಆರೋಗ್ಯ ಮತ್ತು ಜೀವನಶೈಲಿಯಲ್ಲಿ ಅದರ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಯಶಸ್ಸಿಗಿಂತ ಭಾಗವಹಿಸುವುದು ಮುಖ್ಯ ಎಂಬ ನಿಜವಾದ ತತ್ವವನ್ನು ಅರ್ಥಮಾಡಿಕೊಳ್ಳಲು ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ಕ್ರೀಡೆಗಳು ತಾಂತ್ರಿಕ ಕೌಶಲ್ಯವನ್ನು ಬೆಳೆಸದೆ, ಆತ್ಮವಿಶ್ವಾಸ, ಸಹಕಾರ ಮತ್ತು ಇಚ್ಛಾಶಕ್ತಿಯನ್ನು ಹೆಚ್ಚಿಸುತ್ತವೆ. ನನ್ನಲ್ಲಿ ಎಲ್ಲವೂ ಸಾಧ್ಯ ಎಂಬ ಭಾವನೆ ಪ್ರತಿಯೊಬ್ಬ ಆಟಗಾರನೊಳಗಿರುವ ಜ್ವಾಲೆಯನ್ನು ಬೆಳಗಿಸುತ್ತದೆ ಎಂದು ಹೇಳಿದರು.ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಕ್ರೀಡೆ ಕೇವಲ ದೈಹಿಕ ಚಟುವಟಿಕೆಯಲ್ಲ, ಅದು ಶಿಸ್ತು, ಪರಿಶ್ರಮ ಮತ್ತು ತಂಡದ ಶಕ್ತಿಯನ್ನು ಬೆಳಸುವ ಪ್ರಕ್ರಿಯೆ. ಕ್ರೀಡಾಪಟುಗಳ ಈ ಉತ್ಸಾಹ ಉಳಿದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ, ವಿಶ್ವವಿದ್ಯಾನಿಲಯದ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತಾಗಬೇಕು ಎಂದು ಹಾರೈಸಿದರು.ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಮಾತನಾಡಿ, ಉತ್ತಮ ಕ್ರೀಡಾಪಟುಯಾಗಬೇಕಾದರೆ ನಿರಂತರ ಪರಿಶ್ರಮ, ಶಿಸ್ತು, ಮತ್ತು ಎಲ್ಲ ಕ್ರೀಡೆಗಳ ತಂತ್ರಗಳನ್ನು ಕರಗತ ಮಾಡಿಕೊಳ್ಳುವ ಮನೋಭಾವ ಅವಶ್ಯಕ. ಕ್ರೀಡೆಯ ಜೊತೆಗೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು ಅಗತ್ಯ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕ್ರೀಡಾ ಸಾಧನೆಗೆ ಅವಿಭಾಜ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.ಅಧ್ಯಕ್ಷತೆಯನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ವಹಿಸಿದ್ದರು. ಕ್ರೀಡಾಕೂಟಕ್ಕೆ ಆಗಮಿಸಿದ ಎಲ್ಲ ಕ್ರೀಡಾತಂಡಗಳು ಪಥಸಂಚಲನ ನಡೆಸಿದರು. ಇದರಲ್ಲಿ ವಿಶೇಷವಾಗಿ ಮಹಿಳಾ ವಿವಿಯ ಮಹಿಳಾ ಬ್ಯಾಂಡ್ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಯ ಕ್ರೀಡಾಪಟುಗಳು, ನಿರ್ದೇಶಕರು, ವ್ಯವಸ್ಥಾಪಕರು, ಮಹಿಳಾ ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಹಾಜರಿದ್ದರು.
ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಡಿದರು. ಕ್ರೀಡಾ ನಿರ್ದೇಶಕ ಪ್ರೊ.ಸಕ್ಪಾಲ ಹೂವಣ್ಣ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅಶ್ವಿನಿ.ಕೆ.ಎನ್ ಹಾಗೂ ಸಂಶೋಧನಾ ವಿದ್ಯಾರ್ಥಿನಿ ಕರುಣಾ ಅತಿಥಿಗಳನ್ನು ಪರಿಚಯಿಸಿದರು. ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ಹನುಮಂತಯ್ಯ ಪೂಜಾರಿ ನಿರೂಪಿಸಿದರು. ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ರಾಜಕುಮಾರ ಮಾಲಿಪಾಟೀಲ ವಂದಿಸಿದರು.ಕೋಟ್‌ಶಿಕ್ಷಣ ನಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮಾರ್ಗ. ಕ್ರೀಡಾಪಟುಗಳು ತಮ್ಮ ಗುರಿ ತಲುಪಲು ತೋರಿಸುವ ಶ್ರದ್ಧೆ, ಶಿಸ್ತು, ಮತ್ತು ತ್ಯಾಗಗಳು ಜೀವನದಲ್ಲಿ ಯಶಸ್ಸಿನ ದಾರಿ ತೋರಿಸುತ್ತವೆ. ಅದನ್ನು ನಾವು ಶ್ರೇಷ್ಠ ಗುರುವಿನ ಗುಣಗಳೊಂದಿಗೆ ಹೋಲಿಸಬಹುದು. ಶಿಕ್ಷಣ ಮತ್ತು ಕ್ರೀಡೆಗಳ ಸಮನ್ವಯವು ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.ರೇಣುಕಾ.ಜಿ, ಕೆನರಾ ಬ್ಯಾಂಕ್‌ನ ಡಿವಿಜನಲ್ ಮ್ಯಾನೇಜರ್