ಕ್ರೀಡಾ ಚಟುವಟಿಕೆಗಳಿಂದ ಪರಸ್ಪರ ಸಾಮರಸ್ಯ ವೃದ್ಧಿ: ಜೆ.ಆರ್.ರಾಕೇಶ್‌

| Published : Sep 04 2025, 01:00 AM IST

ಕ್ರೀಡಾ ಚಟುವಟಿಕೆಗಳಿಂದ ಪರಸ್ಪರ ಸಾಮರಸ್ಯ ವೃದ್ಧಿ: ಜೆ.ಆರ್.ರಾಕೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡಾ ದಿಗ್ಗಜರನ್ನು ಗೌರವಿಸಲು ಮತ್ತು ದೈಹಿಕ ಸದೃಢತೆಯನ್ನು ಉತ್ತೇಜಿಸಲು ಧ್ಯಾನ್ ಚಂದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವಜನ ವ್ಯವಹಾರ ಹಾಗೂ ಕ್ರೀಡಾ ಇಲಾಖೆ, ಮೇರಾ ಯುವ ಭಾರತ್‌ ಹಾಗೂ ಇಲ್ಲಿನ ಶ್ರೀ ದೇವರಾಜ್‌ ಅರಸ್‌ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸಹಯೋಗದಲ್ಲಿ ಹಾಕಿ ಮಾಂತ್ರಿಕ ಮೇಜರ್‌ ಧ್ಯಾನ್‌ಚಂದ್‌ ಅವರ ಸ್ಮರಣಾರ್ಥ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅಭಿನಂದನೆ, ಕ್ರೀಡಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಬುಧವಾರ ನಡೆಯಿತು.

ಕಾಲೇಜಿನ ಗೌರ್ನಿಂಗ್‌ ಕೌನ್ಸಿಲ್‌ ಸದಸ್ಯ ಜೆ.ಆರ್.ರಾಕೇಶ್‌ ಕಾರ್ಯಕ್ರಮವನ್ನು ಉದ್ಘಾಟಿಸಿ, ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು.

ಬಳಿಕ ಮಾತನಾಡಿ, ಕ್ರೀಡಾ ದಿಗ್ಗಜರನ್ನು ಗೌರವಿಸಲು ಮತ್ತು ದೈಹಿಕ ಸದೃಢತೆಯನ್ನು ಉತ್ತೇಜಿಸಲು ಧ್ಯಾನ್ ಚಂದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸಲಾಗುತ್ತಿದೆ. ಶಾಂತಿಯುತ ಸಮಾಜಗಳನ್ನು ಉತ್ತೇಜಿಸಲು ಕ್ರೀಡೆ ಎಂಬುದು ಈ ವರ್ಷದ ಧ್ಯೇಯವಾಗಿದೆ. ಧ್ಯಾನ್ ಚಂದ್ 1928, 1932 ಮತ್ತು 1936 ರ ಒಲಿಂಪಿಕ್ಸ್‌ನ ಹಾಕಿ ಕ್ರೀಡೆಯಲ್ಲಿ ಭಾರತ ಚಿನ್ನದ ಪದಕವನ್ನು ಸತತ 3 ಬಾರಿ ಪಡೆಯಲು ಪ್ರಮುಖ ಕಾರಣರಾದವರು. ಅವರ ಕ್ರೀಡಾಸ್ಪೂರ್ತಿ ಎಲ್ಲರಿಗೂ ಮಾದರಿಯಾಗಿದೆ. ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಯುವ ಕ್ರೀಡಾಪಟುಗಳು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.

ಮೇರಾ ಯುವ ಭಾರತ್‌ ಜಿಲ್ಲಾ ಸಂಯೋಜಕರಾದ ಕೆ.ಶ್ರೀವಾಣಿ ಕೋನರೆಡ್ಡಿ ಮಾತನಾಡಿ, ಯುವಜನರ ಕ್ರೀಡಾ ಚಟುವಟಿಕೆಗಳ ಆಸಕ್ತಿಯನ್ನು ಮೇರಾ ಯುವ ಭಾರತ್‌ ಸಂಘಟನೆ ಉತ್ತೇಜಿಸುತ್ತದೆ. ಏಕತೆ ಮತ್ತು ತಂಡದ ಕೆಲಸವನ್ನು ಬೆಳೆಸುವಲ್ಲಿ ಕ್ರೀಡೆಯ ಪಾತ್ರ ಬಹಳ ಮುಖ್ಯವಾಗಿದೆ, ಕ್ರೀಡೆಗಳನ್ನು ಶಾಂತಿ, ಒಳಗೊಳ್ಳುವಿಕೆ ಮತ್ತು ಪರಸ್ಪರ ತಿಳುವಳಿಕೆಯ ಸಾಧನವಾಗಿ ಬಳಸಿಕೊಳ್ಳುವ ಸಮುದಾಯಗಳನ್ನು ಇದು ಉತ್ತೇಜಿಸುತ್ತದೆ, ಸಹಕಾರ ಮತ್ತು ಏಕತೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದರು.

ಲಯನ್ಸ್‌ ಕ್ಲಬ್‌ ಆಫ್‌ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗಿಯಾಗುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿಗೆ ಆದ್ಯತೆ ನೀಡಬೇಕು. ದೊಡ್ಡಬಳ್ಳಾಪುರದಲ್ಲಿ ಅನೇಕ ಕ್ರೀಡಾಪಟುಗಳು ವಿಶೇಷ ಸಾಧನೆ ಮಾಡಿದ್ದಾರೆ ಎಂದರು.

ದೇವರಾಜ್‌ ಅರಸ್‌ ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಎಂ.ಚಿಕ್ಕಣ್ಣ ಮಾತನಾಡಿ ಕ್ರೀಡಾ ದಿನದ ಮಹತ್ವವನ್ನು ತಿಳಿಸಿದರು.

ಇದೇ ವೇಳೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು. ಕ್ರೀಡಾ ಸಾಮಗ್ರಿಗಳ ಕಿಟ್‌ಗಳನ್ನು ಅನ್ನು ವಿತರಿಸಲಾಯಿತು. ರಾಷ್ಟ್ರೀಯ ಕ್ರೀಡಾ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಪ್ರಾಂಶುಪಾಲ ಡಾ.ಎಂ.ಎಸ್‌.ಗೌರಪ್ಪ ಅಧ್ಯಕ್ಷತೆ ವಹಿಸಿದ್ದರು. ಗೌರ್ನಿಂಗ್‌ ಕೌನ್ಸಿಲ್‌ ಸದಸ್ಯರಾದ ವಿದ್ವತ್‌, ಉತ್ತಮ್‌ಕುಮಾರ್, ಉಪಪ್ರಾಂಶುಪಾಲ ಕೆ.ದಕ್ಷಿಣಾಮೂರ್ತಿ, ದೈಹಿಕ ಶಿಕ್ಷಣ ನಿರ್ದೇಶಕ ವಿ.ಶ್ರೀನಿವಾಸ್‌, ಆರ್‌ಎಲ್‌ಜೆಐಟಿ ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ಉದ್ಯೋಗ ತರಬೇತಿ ಅಧಿಕಾರಿ ಬಾಬುಸಾಬಿ, ಉಪನ್ಯಾಸಕಿ ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.

ಫೋಟೋ-3ಕೆಡಿಬಿಪಿ2- ದೊಡ್ಡಬಳ್ಳಾಪುರದ ಶ್ರೀ ದೇವರಾಜ್‌ ಅರಸ್‌ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರ್ನಿಂಗ್‌ ಕೌನ್ಸಿಲ್‌ ಸದಸ್ಯ ಜೆ.ಆರ್.ರಾಕೇಶ್ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದರು.