ಬಳ್ಳಾರಿ: ನಗರದ ಸಂಗನಕಲ್ಲು ರಸ್ತೆಯಲ್ಲಿ ಆಯೋಜಿಸಲಾಗಿದ್ದ `ಸ್ಟೀಲ್ ಸಿಟಿ ರನ್-೨೦೨೬'''' ಮ್ಯಾರಥಾನ್ ಓಟ ಸಾವಿರಾರು ಕ್ರೀಡಾಪಟುಗಳು ಭಾಗವಹಿಸುವ ಮೂಲಕ ಭಾನುವಾರ ಯಶಸ್ವಿಯಾಗಿ ನಡೆಯಿತು.
ಬಳ್ಳಾರಿ ಸೈಕ್ಲಿಸ್ಟ್ಸ್ ಆ್ಯಂಡ್ ರನ್ನರ್ಸ್ ಫೌಂಡೇಶನ್ (ಬಿಸಿಆರ್‌ಎಫ್) ವತಿಯಿಂದ ಆಯೋಜಿಸಲಾಗಿದ್ದ ಐತಿಹಾಸಿಕ ೫ನೇ ಆವೃತ್ತಿಯ `ಸ್ಟೀಲ್ ಸಿಟಿ ರನ್-೨೦೨೬'''' ಮ್ಯಾರಥಾನ್ ಓಟಕ್ಕೆ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇಂತಹ ಓಟಗಳು ಪ್ರೇರಣೆಯಾಗಿದ್ದು, ಯುವಜನರು ಸೇರಿದಂತೆ ಎಲ್ಲ ವಯೋಮಾನದವರು ದೈಹಿಕ ಸದೃಢತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಪಾಲಿಕೆ ಮೇಯರ್ ಪಿ. ಗಾದೆಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಬದಲಾಗುತ್ತಿರುವ ಜೀವನ ಶೈಲಿಯಿಂದ ನಾನಾ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡಿದೆ. ಉತ್ತಮ ಆರೋಗ್ಯ ಮುಖ್ಯ, ಆರೋಗ್ಯ ಚೆನ್ನಾಗಿದ್ದರೆ ಏನೆಲ್ಲಾ ಸಾಧಿಸಬಹುದು. ಓಟ, ಕ್ರೀಡೆ, ವ್ಯಾಯಾಮ, ಯೋಗ ಉತ್ತಮ ಆರೋಗ್ಯಕ್ಕೆ ಮುಖ್ಯವಾಗಿವೆ ಎಂದು ಅವರು ಪ್ರತಿಪಾದಿಸಿದರು.ಸೈಕ್ಲಿಸ್ಟ್ಸ್ ಆ್ಯಂಡ್ ರನ್ನರ್ಸ್ ಅಧ್ಯಕ್ಷ ಡಾ. ತಿಪ್ಪಾರೆಡ್ಡಿ ಮಾತನಾಡಿ, ಪ್ರಸ್ತುತ ದಿನಗಳ ಜೀವನ ಶೈಲಿಯಿಂದ ಜನರು ನಾನಾ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ, ಜನರನ್ನು ಉತ್ತೇಜಿಸಲು ಸಣ್ಣ ಪ್ರಯತ್ನ ಇದಾಗಿದೆ. ಕ್ರೀಡೆ, ಓಟ, ವ್ಯಾಯಾಮ, ಯೋಗಭ್ಯಾಸ ಮಾಡುವುದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಎಲ್ಲ ವಯಸ್ಕರಿಗೂ ಓಟದ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಗಿದೆ ಎಂದರು.
ಖ್ಯಾತ ವೈದ್ಯ ಡಾ. ಬಿ.ಕೆ. ಸುಂದರ್ ಮಾತನಾಡಿ, ಕಳೆದ ಐದು ವರ್ಷಗಳಿಂದ ಸ್ಟೀಲ್ ಸಿಟಿ ರನ್ ಬಳ್ಳಾರಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ಫಿಟ್ನೆಸ್ ಕಾರ್ಯಕ್ರಮವಾಗಿ ಬೆಳೆದಿದೆ. ಈ ಬಾರಿ ಮೊದಲ ಬಾರಿಗೆ ವೃತ್ತಿಪರ ಓಟಗಾರರಿಗಾಗಿ ೧೬ ಕಿ.ಮೀ ಟೈಮ್ಡ್ ರನ್ ಆಯೋಜಿಸಿರುವುದು ಮ್ಯಾರಥಾನ್ ಓಟದ ವಿಶೇಷ ಆಕರ್ಷಣೆಯಾಗಿದೆ ಎಂದು ತಿಳಿಸಿದರು.
ಮ್ಯಾರಥಾನ್ ಓಟದಲ್ಲಿ ೧೬ ಕಿ.ಮೀ, ೧೦ ಕಿ.ಮೀ, ೫ ಕಿ.ಮೀ ಟೈಮ್ಡ್ ರನ್ ಹಾಗೂ ೩ ಕಿ.ಮೀ ಮಜಾ ರನ್ ವಿಭಾಗಗಳಲ್ಲಿ ವಿವಿಧ ವಯೋಮಾನದ ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಿಗೆ ವಯೋಮಿತಿ ಹಾಗೂ ಲಿಂಗ ಆಧಾರಿತ ವಿಭಾಗಗಳಲ್ಲಿ ಒಟ್ಟು ೭ ಲಕ್ಷಕ್ಕೂ ಅಧಿಕ ಬಹುಮಾನಗಳನ್ನು ವಿತರಿಸಲಾಯಿತು. ಜೊತೆಗೆ ಭಾಗವಹಿಸಿದವರಿಗೆ ಟಿ-ಶರ್ಟ್, ಬಿಬ್ ಸಂಖ್ಯೆ, ಉಪಹಾರ, ನೀರಿನ ವ್ಯವಸ್ಥೆ, ಮಾರ್ಗಮಧ್ಯೆ ಸಹಕಾರ, ಉಚಿತ ಛಾಯಾಚಿತ್ರ, ಫಿನಿಷರ್ ಮೆಡಲ್ ಹಾಗೂ ಇ-ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಕಳೆದ ೨೦೧೫ರಲ್ಲಿ ಬಳ್ಳಾರಿ ಸೈಕ್ಲಿಂಗ್ ಕ್ಲಬ್ ಹಾಗೂ ಬಳ್ಳಾರಿ ರನ್ನರ್ಸ್ ಗುಂಪಿನಿಂದ ಆರಂಭವಾದ ಬಿಸಿಆರ್‌ಎಫ್ ಸಂಸ್ಥೆ ಆರೋಗ್ಯ ಜಾಗೃತಿ, ಫಿಟ್ನೆಸ್, ಮತದಾನ ಜಾಗೃತಿ, ಮಾದಕ ವಸ್ತು ವಿರೋಧಿ ಅಭಿಯಾನ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಎಂದು ಸಂಘಟಕರು ತಿಳಿಸಿದರು.ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸ್ಟೀಲ್ ಸಿಟಿ ರನ್-೨೦೨೬ ಅನ್ನು ಅತ್ಯಂತ ಯಶಸ್ವಿಗೊಳಿಸಿದರು. ಸಂಘಟಕರು, ಸ್ವಯಂಸೇವಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಕಾರ್ಯಕ್ರಮ ಸುಸೂತ್ರವಾಗಿ ನಡೆದಿದ್ದು, ಬಳ್ಳಾರಿಯಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕುರಿತು ಮತ್ತಷ್ಟು ಜಾಗೃತಿ ಮೂಡಿಸುವಲ್ಲಿ ಈ ಓಟ ಮಹತ್ವದ ಹೆಜ್ಜೆಯಾಯಿತು.
ಕಾರ್ಯಕ್ರಮದಲ್ಲಿ ಫೌಂಡೇಶನ್ ಉಪಾಧ್ಯಕ್ಷ ನರೇಂದ್ರ, ಕಾರ್ಯದರ್ಶಿ ವಿಕಾಸ್ ಜೈನ್, ಜಂಟಿ ಕಾರ್ಯದರ್ಶಿ ಡಾ.ಪ್ರಶಾಂತ್ ವರ್ಮಾ, ಖಜಾಂಚಿ ವಿನೋದ್ ಜೈನ್, ಡಾ.ರವಿಶಂಕರ್ ಸೇರಿದಂತೆ ವಿವಿಧ ಗಣ್ಯರು ಇದ್ದರು.