ಜೀವನೋತ್ಸಾಹ ಹೆಚ್ಚಿಸುವ ಸಾಧನ ಕ್ರೀಡೆ: ಪುರುಷೋತ್ತಮಾನಂದ ಶ್ರೀ

| Published : Sep 03 2025, 01:00 AM IST

ಜೀವನೋತ್ಸಾಹ ಹೆಚ್ಚಿಸುವ ಸಾಧನ ಕ್ರೀಡೆ: ಪುರುಷೋತ್ತಮಾನಂದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡೆಗಳು ಜೀವನದ ಉತ್ಸಾಹವನ್ನು ಹೆಚ್ಚಿಸುವ ಸಾಧನ, ಸೋಲು, ಗೆಲುವಿನ ಮೆಟ್ಟಿಲಾಗಬೇಕು. ಕ್ರೀಡಾ ಮನೋಭಾವದಿಂದ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಹೊಸದುರ್ಗದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕ್ರೀಡೆಗಳು ಜೀವನದ ಉತ್ಸಾಹವನ್ನು ಹೆಚ್ಚಿಸುವ ಸಾಧನ, ಸೋಲು, ಗೆಲುವಿನ ಮೆಟ್ಟಿಲಾಗಬೇಕು. ಕ್ರೀಡಾ ಮನೋಭಾವದಿಂದ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಹೊಸದುರ್ಗದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ನುಡಿದರು.

ನಗರದ ನೇತಾಜಿ ಸುಭಾಷ್‌ ಚಂದ್ರಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಲಕ್ಯಾ ಗ್ರಾಮದ ಶ್ರೀ ಸಿದ್ದೇಶ್ವರ ಪ್ರೌಢಶಾಲೆ ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ಚಿಕ್ಕಮಗಳೂರು ಎಫ್ ವಲಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಕ್ರೀಡೆಗಳು ಜೀವನೋತ್ಸಾಹದ ಜತೆಗೆ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಹೆಚ್ಚು ಸಾಮರ್ಥ್ಯ ಪಡೆಯಲು ಸಾಧ್ಯವಾಗುತ್ತದೆ. ಸೋಲು-ಗೆಲುವು ಸಹಜ, ಪ್ರತಿಯೊಬ್ಬರೂ ಕ್ರೀಡಾ ಮನೋಭಾವದಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆ ಹೊರಬರಲು ಸಾಧ್ಯ ಎಂದರು.

ತೀರ್ಪುಗಾರರು ತಾರತಮ್ಯ ಇಲ್ಲದಂತೆ ನ್ಯಾಯ ಸಮ್ಮತವಾದ ನಿರ್ಣಯ ಕೈಗೊಳ್ಳಲಿದ್ದಾರೆ. ಜೀವನದಲ್ಲಿ ಸಾಧನೆ ಮಾಡಬೇಕಾದರೆ ದೈಹಿಕವಾಗಿ, ಮಾನಸಿಕವಾಗಿ ಉತ್ತಮ ಸಾಮರ್ಥ್ಯ ಪಡೆಯಲು ಕ್ರೀಡೆಗಳಲ್ಲಿ ಭಾಗವಹಿಸಿ ಜೀವನೋತ್ಸಾಹ ಹೆಚ್ಚಿಸಿಕೊಳ್ಳಿ ಎಂದು ಹೇಳಿದರು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಗ್ರಾಮೀಣ ಕ್ರೀಡೆಗಳು ದೇಶದ ಬಹುದೊಡ್ಡ ಆಸ್ತಿ. ವಿದ್ಯಾರ್ಥಿಗಳು ಹೆಚ್ಚು ಗ್ರಾಮೀಣ ಮಟ್ಟದ ಕ್ರೀಡೆಗಳಲ್ಲಿ ಸ್ಪರ್ಧಿಸುವ ಮೂಲಕ ಪೂರ್ವಿಕರ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕು ಎಂದರು.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿಂದ ನಡೆಯುತ್ತಿರುವ ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯೋಗಿಯಾಗಿದೆ ಎಂದ ಅವರು, ಗ್ರಾಮೀಣ ಭಾಗದ ಕ್ರೀಡೆಗಳು ನಶಿಸುತ್ತಿರುವ ಕಾಲದಲ್ಲಿ ವಿದ್ಯಾರ್ಥಿಗಳು ಇಂದಿಗೂ ದೇಹಕ್ಕೆ ಶಕ್ತಿ ನೀಡುವಂತಹ ಕಬ್ಬಡಿ ಕ್ರೀಡೆ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕ್ರೀಡಾಕೂಟಕ್ಕೆ ಸರ್ಕಾರದ ಜತೆಗೆ ಸಾರ್ವಜನಿಕರು, ದಾನಿಗಳು ಹಾಗೂ ಸ್ಥಳೀಯ ಸಹಭಾಗಿತ್ವದಲ್ಲಿ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಶಿಕ್ಷಕರು ಕೂಡ ಮಕ್ಕಳಲ್ಲಿರುವ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದರಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳು ಮುಂಚೂಣಿಗೆ ಬರಲು ಸಾಧ್ಯ ಎಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಮಾತನಾಡಿ, ಕ್ರೀಡೆಗಳು ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ. ಸ್ಪರ್ಧೆಗಳಲ್ಲಿ ಪ್ರಯತ್ನಗಳಿರಬೇಕು. ಗೆದ್ದರೆ ಖುಷಿಯಿರಲಿ, ಸೋತರೆ ಮತ್ತೊಮ್ಮೆ ಪ್ರಯತ್ನಿಸುವ ಛಲವು ಇದ್ದಲ್ಲಿ, ಭವಿಷ್ಯದಲ್ಲಿ ಎತ್ತರಕ್ಕೆ ಹೋಗಲು ಸಾಧ್ಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ, ಸಂಯೋಜಕ ಕೃಷ್ಣಮೂರ್ತಿ ಅರಸ್, ಲಕ್ಯಾ ಗ್ರಾಪಂ ಅಧ್ಯಕ್ಷ ಹನೀಫ್, ಉಪಾಧ್ಯಕ್ಷ ಕಾಂತರಾಜ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ನರಸಿಂಹಮೂರ್ತಿ ಸ್ವಾಗತಿಸಿ, ಚಂದ್ರಶೇಖರ್ ವಂದಿಸಿದರು.