ಯೋಗವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ, ಏಕಾಗ್ರತೆ ಮತ್ತು ಶಿಸ್ತನ್ನು ಬೆಳೆಸಲು ಸಹಕಾರಿಯಾಗಿದೆ. ಕ್ರೀಡಾ ಚಟುವಟಿಕೆಗಳು ದೈಹಿಕ ಸಾಮರ್ಥ್ಯ, ಆತ್ಮವಿಶ್ವಾಸ, ಶಿಸ್ತು ಹಾಗೂ ಏಕಾಗ್ರತೆಯ ಬೆಳವಣಿಗೆಗೆ ಪೂರಕವಾಗಿವೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸಾತಗಳ್ಳಿಯ ಸಂತ ಜೋಸೆಫ್ ಬಾಲಕಿಯರ ಪದವಿಪೂರ್ವ ಕಾಲೇಜು ಹಾಗೂ ಟೆರೇಷಿಯನ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಮಾರ್ಗದರ್ಶನದಲ್ಲಿ 2026–27ನೇ ಸಾಲಿನ ಮೈಸೂರು ನಗರ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಯೋಗ ಚಾಂಪಿಯನ್ಶಿಪ್ ಅನ್ನು ಸಾತಗಳ್ಳಿಯ ಸಂತ ಜೋಸೆಫ್ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.ಮುಖ್ಯ ಅತಿಥಿಯಾಗಿದ್ದ ಎಂ.ಡಿ.ಇಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಡ್ವರ್ಡ್ ವಿಲಿಯಂ ಸಲ್ಡಾನ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗಳ ಮಹತ್ವ ವಿವರಿಸಿದರು.
ಯೋಗವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ, ಏಕಾಗ್ರತೆ ಮತ್ತು ಶಿಸ್ತನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ತಿಳಿಸಿ, ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.ಟೆರೇಷಿಯನ್ ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ನಿರ್ದೇಶಕ ಆಂಥೋನಿ ಮೋಸೆಸ್ ಅವರು ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಮತ್ತು ಯೋಗದ ಮಹತ್ವ ವಿವರಿಸಿದರು. ಕ್ರೀಡಾ ಚಟುವಟಿಕೆಗಳು ದೈಹಿಕ ಸಾಮರ್ಥ್ಯ, ಆತ್ಮವಿಶ್ವಾಸ, ಶಿಸ್ತು ಹಾಗೂ ಏಕಾಗ್ರತೆಯ ಬೆಳವಣಿಗೆಗೆ ಪೂರಕವಾಗಿವೆ ಎಂದು ತಿಳಿಸಿದರು.
ಮೈಸೂರು ನಗರದ 25 ಕಾಲೇಜುಗಳಿಂದ 50ಕ್ಕೂ ಹೆಚ್ಚು ಯೋಗಪಟುಗಳು ಈ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ವಿವಿಧ ಯೋಗಾಸನ ಪ್ರದರ್ಶಿಸಿದರು. ಸ್ಪರ್ಧಿಗಳು ತಮ್ಮ ಯೋಗಾಭ್ಯಾಸ, ದೈಹಿಕ ಸಾಮರ್ಥ್ಯ, ಸಮತೋಲನ ಹಾಗೂ ಏಕಾಗ್ರತೆ ಪ್ರದರ್ಶಿಸುವ ಮೂಲಕ ಕ್ರೀಡಾಕೂಟಕ್ಕೆ ಮೆರುಗು ನೀಡಿದರು.ಸಂತ ಜೋಸೆಫ್ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕ್ರಿಸ್ಟಿಯಾನಾ ಫಿಲೋಮಿನಾ ಪೆರೇರಾ ಸ್ವಾಗತಿಸಿದರು. ಸಂತ ಜೋಸೆಫ್ ಪಿಯು ಹಾಗೂ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ವಾಣಿ ಕ್ರಿಸ್ಟೋಫರ್ ವಂದಿಸಿದರು. ಕನ್ನಡ ಉಪನ್ಯಾಸಕ ಡಾ.ಜೆ.ಎನ್. ಕೋಮಲಾ ಕಾರ್ಯಕ್ರಮ ನಿರೂಪಿಸಿದರು.
ಒಟ್ಟಾರೆ ಯೋಗದ ಮಹತ್ವ ಸಾರಿದ ಈ ಅಂತರ ಕಾಲೇಜು ಚಾಂಪಿಯನ್ ಶಿಪ್ ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿ, ಶಿಸ್ತು, ಏಕಾಗ್ರತೆ ಹಾಗೂ ಕ್ರೀಡಾಸ್ಫೂರ್ತಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಕ್ರೀಡಾಕೂಟವು ಯಶಸ್ವಿಯಾಗಿ ನೆರವೇರಿತು.