ವಿದ್ಯಾರ್ಥಿ ಜೀವನದ ಸರ್ವಾಂಗೀಣ ವಿಕಸನದಲ್ಲಿ ಕ್ರೀಡೆಗೆ ಮಹತ್ವದ ಪಾತ್ರವಿದೆ. ಕ್ರೀಡಾ ಸಾಧನೆ ವಿದ್ಯಾರ್ಥಿಯ ಭವಿಷ್ಯ ರೂಪಿಸಬಲ್ಲುದಾಗಿದೆ.
ಕುಮಟಾ: ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ನಿರಂತರ ಅಭ್ಯಾಸದ ಮೂಲಕ ಬೆಳೆಸಿಕೊಳ್ಳಬೇಕು. ಕ್ರೀಡಾಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ತಾಳ್ಮೆ, ಸಮಯಪ್ರಜ್ಞೆ ಹಾಗೂ ಪರಸ್ಪರ ಗೌರವದ ಮಹತ್ವವನ್ನು ಕಲಿಸುತ್ತವೆ. ಈ ಗುಣಗಳು ಅವರ ಮುಂದಿನ ಜೀವನದಲ್ಲಿಯೂ ಉಪಯುಕ್ತವಾಗುತ್ತವೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.
ಪಟ್ಟಣದ ಮಣಕಿ ಮಹಾತ್ಮ ಗಾಂಧಿ ಮೈದಾನದಲ್ಲಿ ಅ.೧೮ರ ವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ೧೪ ಮತ್ತು ೧೭ ವರ್ಷ ವಯೋಮಿತಿಯೊಳಗಿನ ಬಾಲಕ- ಬಾಲಕಿಯರ ವಿಭಾಗ ಹಾಗೂ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಗುರುವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿ ಜೀವನದ ಸರ್ವಾಂಗೀಣ ವಿಕಸನದಲ್ಲಿ ಕ್ರೀಡೆಗೆ ಮಹತ್ವದ ಪಾತ್ರವಿದೆ. ಕ್ರೀಡಾ ಸಾಧನೆ ವಿದ್ಯಾರ್ಥಿಯ ಭವಿಷ್ಯ ರೂಪಿಸಬಲ್ಲುದಾಗಿದೆ. ಕ್ರೀಡೆ ಮತ್ತು ಪಠ್ಯ ಕಲಿಕೆಯಲ್ಲಿ ಉತ್ಸಾಹ, ಶಿಸ್ತು, ಪರಿಶ್ರಮ ಮತ್ತು ಬದ್ಧತೆಯನ್ನು ಅಳವಡಿಸಿಕೊಂಡರೆ ಉತ್ತಮ ಸಾಧಕರಾಗಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ್ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಸೋಲು- ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಯುತ್ತದೆ. ತಮ್ಮ ಪ್ರತಿಭೆಯನ್ನು ಇನ್ನಷ್ಟು ಬೆಳೆಸಿಕೊಂಡು ಉನ್ನತ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಕೀರ್ತಿ ತರಬೇಕು ಎಂದರು.ರಾಜ್ಯ ಸರ್ಕಾರಿ ಗ್ರೇಡ್- ೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಗಿರೀಶ ವಿ. ನಾಯಕ ಮಾತನಾಡಿ, ರಾಜ್ಯದೆಲ್ಲೆಡೆಯಿಂದ ಆಗಮಿಸಿರುವ ಕ್ರೀಡಾಪಟುಗಳಿಗೆ ಸಂಘಟಕರು ಅಗತ್ಯ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.
ಗ್ರೇಡ್-೨ ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಭಟ್ಟ ಸೂರಿ ಮಾತನಾಡಿದರು. ಬಿಇಒ ಉದಯ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಜಿ.ನಾಯ್ಕ, ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಾಗ ಹೆಗಡೆ, ಗ್ರೇಡ್- ೨ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ವಸಂತ ಶಾನಭಾಗ, ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಗಾಂವಕರ ಬರ್ಗಿ, ಮುಖ್ಯಾಧ್ಯಾಪಕರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಂ. ಹೆಗಡೆ, ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಬಂಟ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸುಧೀರ ನಾಯಕ, ಗ್ರೇಡ್- ೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ನಾಯ್ಕ ಇತರರು ಉಪಸ್ಥಿತರಿದ್ದರು. ಡಿಡಿಪಿಐ ಲತಾ ನಾಯ್ಕ ಸ್ವಾಗತಿಸಿದರು. ಡಯಟ್ ಪ್ರಾಚಾರ್ಯ ಎನ್.ಆರ್. ಹೆಗಡೆ ವಂದಿಸಿದರು. ಶಿಕ್ಷಕ ಎಂ.ಎಂ. ನಾಯ್ಕ ನಿರೂಪಿಸಿದರು.