ಆರೋಗ್ಯಕರ ಜೀವನಶೈಲಿಗೆ ಕ್ರೀಡೆ ಅತ್ಯವಶ್ಯ: ಸಂಸದ ಪಿ.ಸಿ. ಗದ್ದಿಗೌಡರ

| Published : Aug 30 2025, 01:01 AM IST

ಆರೋಗ್ಯಕರ ಜೀವನಶೈಲಿಗೆ ಕ್ರೀಡೆ ಅತ್ಯವಶ್ಯ: ಸಂಸದ ಪಿ.ಸಿ. ಗದ್ದಿಗೌಡರ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ದಿನನಿತ್ಯದ ಜೀವನ ಶೈಲಿ, ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆ ಅವಶ್ಯಕವಾಗಿದೆ. ಕ್ರೀಡೆ ಮನರಂಜನೆಯೊಂದಿಗೆ ಮನೋವಿಕಾಸ ಹೆಚ್ಚಿಸುವ ಕ್ಷೇತ್ರವಾಗಿದ್ದು, ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರನ್ನಾಗಿ ಮಾಡುವಲ್ಲಿ ಕ್ರೀಡಾ ಚಟುವಟಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಮ್ಮ ದಿನನಿತ್ಯದ ಜೀವನ ಶೈಲಿ, ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆ ಅವಶ್ಯಕವಾಗಿದೆ. ಕ್ರೀಡೆ ಮನರಂಜನೆಯೊಂದಿಗೆ ಮನೋವಿಕಾಸ ಹೆಚ್ಚಿಸುವ ಕ್ಷೇತ್ರವಾಗಿದ್ದು, ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರನ್ನಾಗಿ ಮಾಡುವಲ್ಲಿ ಕ್ರೀಡಾ ಚಟುವಟಿಕೆಗಳ ಪಾತ್ರ ಮಹತ್ವದ್ದಾಗಿದೆ. ಆರೋಗ್ಯಕರ ಜೀವನಶೈಲಿ ಮತ್ತು ಶಾಂತಿಯುತ ಜಗತ್ತಿಗೆ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳ ಕೊಡುಗೆ ಅಪಾರವಾಗಿದೆ. ಕ್ರೀಡಾ ಮನೋಭಾವನೆ ಅಳವಡಿಸಿಕೊಂಡು ಸೋಲು ಗೆಲುವನ್ನು ಸಮಾನವಾಗಿ ತೆಗೆದುಕೊಂಡು ಹೋದಾಗ ಮಾತ್ರ ನಮ್ಮ ಬದುಕು ಚೆನ್ನಾಗಿರಲು ಸಾಧ್ಯ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ತ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ವಿವಿಧ ಕ್ರೀಡಾಕೂಟಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಭಾರತ ಶ್ರೇಷ್ಠ ಹಾಕಿ ಆಟಗಾರರಲ್ಲಿ ಒಬ್ಬರಾದ ಮೇಜರ್ ಧ್ಯಾನಚಂದ ಅವರ ಜನ್ಮದಿದ ನಿಮಿತ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸಲಾಗುತ್ತದೆ. ಈ ದಿನ ರಾಷ್ಟ್ರದ ಕ್ರೀಡಾವೀರರನ್ನು ಗೌರವಿಸುವ ದಿನವಾಗಿದೆ. ಮೇಜರ್ ಧ್ಯಾನಚಂದ ಅವರು ಓಲಿಂಪಿಕ್ ಚಾಂಪಿಯನ್ ಹಾಕಿಯಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಮೇಜರ್ ಧ್ಯಾನಚಂದ್ ಅವರು ಹಾಕಿ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಚಾಂಪಿಯನ್ ಪಟ್ಟ ಪಡೆದುಕೊಂಡಿದ್ದರು. ಅನೇಕ ಕ್ರೀಡಾಪಟುಗಳು ದೇಶಕ್ಕೆ ಕೀರ್ತಿ ತಂದಿದ್ದಾರೆ. ಕ್ರೀಡೆಗಳು ಕೇವಲ ಮನರಂಜನೆ ಮಾತ್ರ ಅಲ್ಲ, ದೈಹಿಕ ಮತ್ತು ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಜೀವನದಲ್ಲಿ ಶಿಸ್ತು, ಸಹಕಾರ, ಸಹನೆ, ಧೈರ್ಯ, ಗುರಿ, ವಿನಯ ಮುಖ್ಯವಾಗಿದ್ದು, ಇವುಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಮೇಜರ್ ಧ್ಯಾನಚಂದ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಆರ್.ಆರ್. ಪಾಟೀಲ ಕ್ರೀಡಾ ದಿನಾಚರಣೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಗುರುಪಾದ ಡೂಗನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸುವ ಮುಖ್ಯ ಉದ್ದೇಶದ ದೇಶದ ಉತ್ತಮ ಕ್ರೀಡಾಪಟುಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ. ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಲು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಜೀವನದಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಅದನ್ನು ಸಮನಾಗಿ ತೆಗೆದುಕೊಂಡು ಮುಂದೆ ಸಾಗಬೇಕಿದೆ.

ಶಶಿಧರ ಕುರೇರ ಜಿಪಂ ಸಿಇಒ