ಸಾರಾಂಶ
ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದಿಂದ ಕ್ರಿಕೆಟ್ ಲೀಗ್ ಪಂದ್ಯಾವಳಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಹಂರಾಜಪುರಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಕ್ರೀಡೆ ಅಗತ್ಯವಾಗಿದ್ದರೂ ಇಂದಿನ ದಿನಗಳಲ್ಲಿ ಕ್ರೀಡೆಯನ್ನು ಕಳೆದು ಕೊಳ್ಳುತ್ತಿದ್ದೇವೆ ಎಂದು ಶಿವಮೊಗ್ಗ ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ವಿಷಾದ ವ್ಯಕ್ತಪಡಿಸಿದರು.
ಕುದುರೆಗುಂಡಿ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಹಾಗೂ ಯುವ ಹೆಬ್ಬಾರ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಹೆಬ್ಬಾರ ಸಮಾಜದವರಿಗೆ ಏರ್ಪಡಿಸಿದ್ದ 2 ದಿನಗಳ ರಾಜ್ಯ ಮಟ್ಟದ ಹೆಬ್ಬಾರ್ ಲೀಗ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.ಒತ್ತಡದ ನಡುವೆಯೂ ಕಳೆದ 3 ವರ್ಷದಿಂದ ಹೆಬ್ಬಾರ ಬ್ರಾಹ್ಮಣ ಸಭಾದವರು ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದ್ದು, ಇದೊಂದು ಕ್ರೀಡಾ ಹಬ್ಬವಾಗಿದೆ. ಇತ್ತೀಚೆಗೆ ನಗರ ಪ್ರದೇಶದಲ್ಲಿ ಎಲ್ ಕೆಜಿ ಮಕ್ಕಳು 4 ಗೋಡೆಗಳ ಮಧ್ಯೆ ಮಾತ್ರ ಕಾಲ ಕಳೆಯುವಂತಾಗಿದೆ. ಯುವ ಜನರಿಗೆ ವ್ಯಕ್ತಿತ್ವ ವಿಕಸನ ಆಗಬೇಕಾದರೆ ಕ್ರೀಡೆ, ಸಾಹಿತ್ಯ, ಸಂಗೀತ ಎಲ್ಲವೂ ಬೇಕಾಗುತ್ತದೆ. ಕ್ರೀಡೆಯಿಂದ ದೇಹಕ್ಕೆ ಮಾತ್ರವಲ್ಲ ಮಾನಸಿಕವಾಗಿಯೂ ಆರೋಗ್ಯವಾಗಿರಬಹುದು.
ಆದರೆ, ಇಂದಿನ ಆಧುನಿಕ ಜಗತ್ತಿನಲ್ಲಿ ಯುವ ಜನರು ಮೊದಲು ಕ್ರೀಡೆ ಕಳೆದುಕೊಂಡಿದ್ದಾರೆ. ನಮ್ಮ ಹೆಬ್ಬಾರ ಸಮಾಜ ದವರು ಬಹಳ ವರ್ಷಗಳ ಹಿಂದೆಯೇ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ತಲುಪಿದ್ದರು. ನಮ್ಮ ಪೂರ್ವಜನರ ಕ್ರೀಡಾ ಸಾಧನೆಯನ್ನು ದಾಖಲಿಸಬೇಕು ಎಂದು ಯುವಜನರಿಗೆ ಕರೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ಶಿವಮೊಗ್ಗ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಕೆ.ಆರ್. ಶಿವಕುಮಾರ್ ಮಾತನಾಡಿ, ಕ್ರೀಡಾ ಪಟುಗಳು ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಸ್ವೀಕಾರ ಮಾಡಬೇಕು ಎಂದರು. ಸಭೆ ಅಧ್ಯಕ್ಷತೆಯನ್ನು ಹೆಬ್ಬಾರ ಬ್ರಾಹ್ಮಣ ಸಭಾದ ತಾಲೂಕು ಘಟಕದ ಅಧ್ಯಕ್ಷ ಸೇತುವೆ ಮನೆ ಸುಬ್ರಮಣ್ಯ ವಹಿಸಿದ್ದರು. ಅತಿಥಿಗಳಾಗಿ ಶಿವಮೊಗ್ಗ ಶಾರದಾ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ವೈ.ಎಂ.ಮಧು, ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚರಣ ಹೆಬ್ಬಾರ, ಯುವ ಬಳಗದ ತಾಲೂಕು ಘಟಕದ ಅಧ್ಯಕ್ಷ ನಿಶಾಂತ ಹೆಬ್ಬಾರ್ ಇದ್ದರು.
ಎ.ಎಸ್.ವೆಂಕಟರಮಣ ಕಾರ್ಯಕ್ರಮ ನಿರೂಪಿಸಿದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ 13 ತಂಡಗಳು ಭಾಗವಹಿಸುತ್ತಿದ್ದಾರೆ. ಭಾನುವಾರ ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.