ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮೊಬೈಲಿಗೆ ಅಂಟಿಕೊಂಡು ದೈಹಿಕ ಚಟುವಟಿಕೆಯಿಂದ ದೂರವಾಗುತ್ತಿದ್ದಾರೆ. ಇಂತಹ ಕ್ರೀಡಾಕೂಟಗಳು ಅವರನ್ನು ಮತ್ತೆ ಮೈದಾನಕ್ಕೆ ತರೆತಂದು ದೈಹಿಕ ಹಾಗೂ ಮಾನಸಿಕವಾಗಿ ಸದೃಢರನ್ನಾಗಿಸುತ್ತವೆ.

ಹಳಿಯಾಳ: ಮಕ್ಕಳನ್ನು ದೈಹಿಕವಾಗಿ ಸದೃಢರನ್ನಾಗಿಸಲು, ಸ್ಪರ್ಧಾತ್ಮಕ ಮನೋಭಾವ, ನಾಯಕತ್ವ ಗುಣ, ಕ್ರೀಡಾಭಿಮಾನ ಮತ್ತು ಭ್ರಾತೃತ್ವದ ಭಾವನೆಯನ್ನು ಬೆಳೆಸಲು ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಡಿ.ಆರ್. ನಾಯ್ಕ್ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಜರುಗಿದ 2026- 27ನೇ ಸಾಲಿನ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ 14 ವರ್ಷದೊಳಗಿನ ವಿದ್ಯಾರ್ಥಿಗಳ ಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮೊಬೈಲಿಗೆ ಅಂಟಿಕೊಂಡು ದೈಹಿಕ ಚಟುವಟಿಕೆಯಿಂದ ದೂರವಾಗುತ್ತಿದ್ದಾರೆ. ಇಂತಹ ಕ್ರೀಡಾಕೂಟಗಳು ಅವರನ್ನು ಮತ್ತೆ ಮೈದಾನಕ್ಕೆ ತರೆತಂದು ದೈಹಿಕ ಹಾಗೂ ಮಾನಸಿಕವಾಗಿ ಸದೃಢರನ್ನಾಗಿಸುತ್ತವೆ. ಪಠ್ಯದ ಜತೆಗೆ ಕ್ರೀಡೆಯು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಅತ್ಯಂತ ಅವಶ್ಯಕ, ಕ್ರೀಡೆಯಿಂದ ಶಿಸ್ತು, ಸಂಯಮ, ಸಹನೆ ಮತ್ತು ಸೋಲನ್ನು ಸ್ವೀಕರಿಸುವ ಗುಣ ಬೆಳೆಯುತ್ತದೆ ಎಂದರು. ನಿರ್ಣಾಯಕರಿಗೆ ಖಡಕ್ ಎಚ್ಚರಿಕೆ: ಕ್ರೀಡಾಕೂಟದ ನಿರ್ಣಾಯಕರು ತೀರ್ಪು ನೀಡುವಾಗ ಯಾವುದೇ ಪಕ್ಷಪಾತ ಮಾಡಬಾರದು ಎಂದು ಡಿಡಿಪಿಐ ಅವರು ಖಡಕ್ ಎಚ್ಚರಿಕೆ ನೀಡಿದರು. ನನ್ನ ತಾಲೂಕು, ಶಾಲೆ ಎಂಬ ಭೇದಭಾವ ಮಾಡದೇ ನಿಷ್ಪಕ್ಷಪಾತವಾಗಿ ನಿರ್ಣಯ ನೀಡಬೇಕು. ಮಕ್ಕಳಲ್ಲಿನ ನೈಜ ಕ್ರೀಡಾ ಪ್ರತಿಭೆ ಮತ್ತು ಕೌಶಲ್ಯವನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ನಿಮ್ಮ ಒಂದು ತಪ್ಪು ನಿರ್ಣಯವು ಪ್ರತಿಭಾವಂತ ಮಗುವಿನ ಭವಿಷ್ಯಕ್ಕೆ ಮಾರಕವಾಗುತ್ತದೆ. ಆದ್ದರಿಂದ ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಕ್ರೀಡಾಪಟುಗಳು ನಿರ್ಣಾಯಕರ ನಿರ್ಣಯವನ್ನು ಒಪ್ಪಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಕ್ರೀಡೆಯಲ್ಲಿ ಗೆಲುವು- ಸೋಲು ಮುಖ್ಯವಲ್ಲ, ಕ್ರೀಡಾ ಸ್ಫೂರ್ತಿ ಮುಖ್ಯ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ ಎಂದರು.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಜಿಲ್ಲೆಯ ವಿವಿದ ತಾಲೂಕುಗಳಿಂದ ಆಗಮಿಸಿದ್ದ ಸಾವಿರಾರು ಬಾಲಕ- ಬಾಲಕಿಯರ ಕ್ರೀಡಾತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಶಾಸಕರ ಮಾದರಿ ಶಾಲೆಯ ಬ್ಯಾಂಡ್ ಸೆಟ್ ವಾದನಕ್ಕೆ ಹೆಜ್ಜೆಹಾಕಿದ ಪುಟಾಣಿ ಕ್ರೀಡಾಪಟುಗಳು ಸಭಿಕರ ಗಮನ ಸೆಳೆದರು.

ನಂತರ ಕಳೆದ ವರ್ಷದ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಖೋ-ಖೋ ಪಂದ್ಯದಲ್ಲಿ ವಿಜೇತರಾದ ಸಾತ್ಮಳ್ಳಿ ಪ್ರಾಥಮಿಕ ಶಾಲೆಯ ತಂಡವು ಕ್ರೀಡಾಜ್ಯೋತಿಯನ್ನು ಮೈದಾನಕ್ಕೆ ತಂದು ಗಣ್ಯರಿಗೆ ಹಸ್ತಾಂತರಿಸಿದರು. ಜಿ.ಎಸ್. ಮಠಪತಿ ಅವರು ಕ್ರೀಡಾಪ್ರಮಾಣ ವಚನವನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ, ತಾಪಂ ಇಒ ವಿಲಾಸರಾಜ್ ಪ್ರಸನ್ನ್, ತಾಲೂಕು ಆರೋಗ್ಯಾಧಿಕಾರಿ ಡಾ. ಅನಿಲಕುಮಾರ ನಾಯ್ಕ, ಜಿಲ್ಲಾ ದೈಹಿಕ ಪರಿವೀಕ್ಷಕ ಪ್ರಕಾಶ ತಾಳಿಕೊಪ್ಪ, ತಾಲೂಕು ಪರಿವೀಕ್ಷಕಿ ಜ್ಯೋತಿಪ್ರಭಾ, ಬಿಆರ್‌ಸಿ ಅಧಿಕಾರಿ ಮಹಾದೇವಿ ಚೌಗುಲಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸತೀಷ್ ನಾಯ್ಕ ಬಾವಿಕೇರಿ, ತಾಲೂಕು ಅಧ್ಯಕ್ಷ ಪ್ರಶಾಂತ ನಾಯ್ಕ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಝಾಕೀರ ಜಂಗೂಬಾಯಿ, ಅಕ್ಷರ ದಾಸೋಹ ಅಧಿಕಾರಿ ಎಸ್.ಎಸ್. ನೂಲಿನ್, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತಿ ಸನದಿ, ತಾಲೂಕು ಅಧ್ಯಕ್ಷ ವೆಂಕಟೇಶ್ ನಾಯ್ಕ, ಹಾಗೂ ಶಿಕ್ಷಕರ ವಿವಿಧ ಸಂಘಟನೆಗಳ ಪ್ರಮುಖರು ಪದಾಧಿಕಾರಿಗಳು ಇದ್ದರು.

ಹಳಿಯಾಳ ಬಿಇಒ ಪ್ರಮೋದ ಮಹಾಲೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡಾಕೂಟದ ಮಾಹಿತಿ ನೀಡಿ ಸ್ವಾಗತಿಸಿದರು. ರಮೇಶ ಪಾಟೀಲ ಹಾಗೂ ಶ್ವೇತಾ ಸೊಲ್ಲಾಪುರಿ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚಿಬ್ಬಲಗೇರಿ ಪ್ರೌಢಶಾಲೆಯ ಶಿಕ್ಷಕ ಸಿದ್ದಪ್ಪ ಬಿರಾದಾರ್ ಅವರನ್ನು ದೆಹಲಿಯು ಸಿಸಿಆರ್‌ಟಿಇ ತಜ್ಞರ ತಂಡವು ಸನ್ಮಾನಿಸಲಾಯಿತು.