ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ಡಾ. ರುದ್ರೇಶ ಘಾಳಿ

| Published : Dec 02 2024, 01:18 AM IST

ಸಾರಾಂಶ

ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸಿಎಆರ್ ತಂಡ ಹೆಚ್ಚು ವಿಭಾಗದಲ್ಲಿ ಗೆಲವು ಸಾಧಿಸಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು.

ಹುಬ್ಬಳ್ಳಿ: ದೈಹಿಕ ಮತ್ತು ಮಾನಸಿಕವಾಗಿ ಹೇಗೆ ಇರಬೇಕು ಎಂಬುದನ್ನು ಕ್ರೀಡೆ ಕಲಿಸಿ ಕೊಡುತ್ತದೆ. ದೈಹಿಕ ಮತ್ತು ಮಾ‌ನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರುದ್ರೇಶ ಘಾಳಿ ಹೇಳಿದರು. ಈ ನಡುವೆ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸಿಎಆರ್ ತಂಡ ಹೆಚ್ಚು ವಿಭಾಗದಲ್ಲಿ ಗೆಲವು ಸಾಧಿಸಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು.

ಇಲ್ಲಿನ ಕಾರವಾರ ರಸ್ತೆಯ ಹಳೆಯ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯ ಘಟಕದ ವತಿಯಿಂದ ಆಯೋಜಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾಜಕ್ಕಾಗಿ ಸದಾ ಕೆಲಸ ಮಾಡುವ ಪೊಲಿಸರು ಎರಡು ದಿನ‌ ಯಶಸ್ವಿಯಾಗಿ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ಜನರಿಗೆ ಸಮಸ್ಯೆಯಾದರೂ ಪೊಲೀಸರ ಹತ್ತಿರ ಬರುತ್ತಾರೆ. ಪೊಲೀಸ್ ಕೆಲಸ ಬಹಳ ಮಹತ್ವದ ಕೆಲಸ ಎಂದು ತಿಳಿಸಿದರು.

ಉದ್ಯಮಿ ಡಾ. ಸಿಎಚ್‌. ವಿ.ಎಸ್.ವಿ. ಪ್ರಸಾದ ಮಾತನಾಡಿ, ಜನರು ಶಾಂತಿಯುತ ಜೀವನ ನಡೆಸುತ್ತಿರುವುದಕ್ಕೆ ಪೊಲೀಸರೇ ಕಾರಣ. ಜನರು ನ್ಯಾಯ ಸಿಗಬಹುದು ಎಂದು ಭರವಸೆ ಇಟ್ಟುಕೊಂಡು ಪೊಲೀಸ್ ಠಾಣೆಗೆ ಬರುತ್ತಾರೆ. ಪೊಲೀಸ್ ಸಮವಸ್ತ್ರಕ್ಕೆ ಬಹಳಷ್ಟು ಮಹತ್ವ ಇದೆ. ಪ್ರತಿಭೆಗಳ ಅನಾವರಣ ಹಾಗೂ ದೈಹಿಕ ಆರೋಗ್ಯ ಸದೃಢವಾಗಿಟ್ಟುಕೊಳ್ಳಲು ಕ್ರೀಡೆಗೆ ಪ್ರಾಮುಖ್ಯತೆ ನೀಡಬೇಕು ಎಂದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಮಾತನಾಡಿ, ಉದ್ವಿಗ್ನ ಪರಿಸ್ಥಿತಿಯಲ್ಲಿ ಹಿರಿಯ ಅಧಿಕಾರಿಗಳ ಸಲಹೆ, ಸೂಚನೆ ತುಂಬಾ ಅವಶ್ಯವಾಗಿದೆ. ಅಧಿಕಾರಿಗಳು ದೊಡ್ಡ ದೊಡ್ಡ ಹುದ್ದೆಗೇರಿದಂತೆ ಹೃದಯವಂತಿಕೆ ಇರಬೇಕು. ಹುಬ್ಬಳ್ಳಿ ಧಾರವಾಡದ ಅಧಿಕಾರಿಗಳಲ್ಲಿ ಹೃದಯವಂತಿಕೆ ಇದೆ. ಎಲ್ಲ ಸಿಬ್ಬಂದಿ ನಿರಂತರವಾಗಿ ಯಾವುದೇ ಕೆಲಸ ಇದ್ದರೂ ಅಚ್ಚುಕಟ್ಟಾಗಿ ಕಾರ್ಯ ಮಾಡಿದ್ದಾರೆ. ಅದಕ್ಕೆ ನಾನು ಋಣಿ. ನಾನು ಅಧಿಕಾರ ವಹಿಸಿಕೊಂಡಾಗ ಅವಳಿ ನಗರದಲ್ಲಿ ಗೊಂದಲ, ಅಸುರಕ್ಷತೆ ವಾತಾವರಣ ಸೃಷ್ಟಿಯಾಗಿತ್ತು. ಅಧಿಕಾರ ವಹಿಸಿಕೊಂಡ ಮೇಲೆ ಒಂದು ವ್ಯವಸ್ಥೆ ಕಾರ್ಯ ಮಾಡಲಾಯಿತು. ಅಧಿಕಾರಿಗಳು, ಸಿಬ್ಬಂದಿ ನನ್ನ ಜೊತೆ ಕೈ ಜೋಡಿಸಿದ್ದಾರೆ. ಮುಂದಿನ ದಿನಗಳಲ್ಲೂ ಹೆಚ್ಚಿನ ಕಾರ್ಯ ಮಾಡೋಣ. ಅಧಿಕಾರಿಗಳು ಸಿಬ್ಬಂದಿಗಿಂತ ಹೆಚ್ವು ಒತ್ತಡದಲ್ಲಿ ಕಾರ್ಯ ಮಾಡುತ್ತಾರೆ. ಅವಳಿ ನಗರದ ಜನರ ನಿರೀಕ್ಷೆಯನ್ನು ಉತ್ತಮ ರೀತಿಯಲ್ಲಿ ತಲುಪೋಣ ಎಂದರು.

ಆರ್‌‌ಪಿಐ ಮಾರುತಿ ಹೆಗಡೆ ಅವರ ಮುಂದಾಳತ್ವದಲ್ಲಿ ಉತ್ತರ ವಿಭಾಗ, ದಕ್ಷಿಣ ವಿಭಾಗ, ಧಾರವಾಡ ವಿಭಾಗ, ಮಹಿಳಾ ವಿಭಾಗ, ಸಂಚಾರಿ ವಿಭಾಗ ಮತ್ತು ಸಿ.ಎ.ಆರ್. ವಿಭಾಗ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು.

ಬಹುಮಾನ ವಿತರಣೆ

ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸಿಎಆರ್ ತಂಡ ಹೆಚ್ಚು ವಿಭಾಗದಲ್ಲಿ ಗೆಲವು ಸಾಧಿಸಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು.

ಪುರುಷರ ವೈಯಕ್ತಿಕ ವಿಭಾಗದಲ್ಲಿ ಧಾರವಾಡ ವಿಭಾಗದ ವೆಂಕಟೇಶ್ ನಾಯ್ಕ ಅವರು ಸತತ ಎರಡನೇ ಬಾರಿಗೆ ವೀರಾಗ್ರಣಿ ಪ್ರಶಸ್ತಿಗೆ ಭಾಜನರಾದರು. ಮಹಿಳಾ ವಿಭಾಗದಲ್ಲಿ ದಕ್ಷಿಣ ವಿಭಾಗದ ರುಕ್ಮೀಣಿ ಎಸ್. ಸತತ ಎರಡನೇ ಬಾರಿಗೆ ವೀರಾಗ್ರಣಿ ಪಡೆದರು. ವಾಲಿಬಾಲ್ ಮತ್ತು ಕಬ್ಬಡ್ಡಿಯಲ್ಲಿ ಸಿಎಆರ್ ತಂಡ ಗೆಲುವು ಸಾಧಿಸಿತು.

ಹಗ್ಗ ಜಗ್ಗಾಟದಲ್ಲಿ ಸಿಎಆರ್ ತಂಡ ಜಯ ಗಳಿಸಿತು. ಪೊಲೀಸ್ ಇಲಾಖೆಯ ಸಿಬ್ಬಂದಿಯವರ ಕುಟುಂಬದವರಿಗಾಗಿ ಆಯೋಜಿಸಿದ್ದ ರಂಗೋಲಿ ಮತ್ತು ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್., ಯಲ್ಲಪ್ಪ ಕಾಶಪ್ಪನವರ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಕುಟುಂಬಸ್ಥರು ಇತರರು ಉಪಸ್ಥಿತರಿದ್ದರು.