ಸಾರಾಂಶ
ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿ ಜೀವನದಲ್ಲಿ ಅತಿಮುಖ್ಯ ಪಾತ್ರ ವಹಿಸುತ್ತವೆ. ಗೆಲುವಿಗೆ ಹಿಗ್ಗದೆ ಸಮಾನವಾಗಿ ಸ್ವೀಕರಿಸುವಂತಾಗಬೇಕು ಎಂದು ಚಾಮರಾಜನಗರ ರೈಫಲ್ ಶೂಟರ್ ರಮೇಶ್ ಬಾಬು ಹೇಳಿದರು. ಕೊಳ್ಳೇಗಾಲದಲ್ಲಿ ಕ್ರೀಡಾಕೂಟದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿ ಜೀವನದಲ್ಲಿ ಅತಿಮುಖ್ಯ ಪಾತ್ರ ವಹಿಸುತ್ತವೆ, ಹಾಗಾಗಿ ಕ್ರೀಡೆ ಜೀವನದ ಒಂದು ಅಂಗವಾಗಿದ್ದು ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರು ಸೋಲಿಗೆ ಎದೆಗುಂದಬಾರದು, ಗೆಲುವಿಗೆ ಹಿಗ್ಗದೆ ಸಮಾನವಾಗಿ ಸ್ವೀಕರಿಸುವಂತಾಗಬೇಕು ಎಂದು ಚಾಮರಾಜನಗರ ರೈಫಲ್ ಶೂಟರ್ ರಮೇಶ್ ಬಾಬು ಹೇಳಿದರು.ಜೆಎಸ್‌ಎಸ್ ಶುಶ್ರೂಷ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟ, ಸಂಘರ್ಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ಮಾತ್ರವಲ್ಲ ನಾವು ತೆರಳಿದ ಕಡೆಗಳಲ್ಲೂ ಶಿಸ್ತಿನಿಂದ ನಡೆದುಕೊಳ್ಳಲು ಪ್ರಯತ್ನಿಸಬೇಕು, ಕ್ರೀಡೆಯಲ್ಲಿ ಪ್ರಯತ್ನ ಎಂಬುದು ಅತಿಮುಖ್ಯ, ಹಾಗಾಗಿ ಸೋಲಿಗೆ ಕುಗ್ಗದೆ ಕ್ರೀಡಾಪಟುಗಳು ಸ್ವಪ್ರಯತ್ನದಿಂದ ಮುಂದೆ ಬರಬೇಕು, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು.ಪ್ರಾಂಶುಪಾಲ ಕೆ.ಎಸ್. ಹೇಮೇಶಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲ ಸನ್ನಿವೇಶಗಳು ಬಹಳ ಆಘಾತಕಾರಿಯಾಗಿರುತ್ತದೆ. ನಾವು ಆರೋಗ್ಯವಾಗಿದ್ದಾಗ ಹಾಗೂ ಸಧೃಡರಾಗಿದ್ದಾಗ ಮಾತ್ರ ಅದನ್ನು ಮೆಟ್ಟಿ ನಿಲ್ಲಲು ಕ್ರೀಡೆ ಮಾನಸಿಕ ಚೈತನ್ಯವನ್ನು ನೀಡುತ್ತದೆ ಎಂದರು.
ದೈಹಿಕ ಶ್ರಮದಾನ, ಯೋಗ, ಧ್ಯಾನ ಸರ್ವಸಮಸ್ಯೆಗಳಿಗೂ ರಾಮಬಾಣವಾಗಿದೆ. ಎಲ್ಲರೂ ಪ್ರತಿದಿನದ ಚಟುವಟಿಕೆಯಂತೆಯೇ ಅದನ್ನು ಮೈಗೂಡಿಸಿಕೊಳ್ಳಬೇಕು, ಆಟೋಟದಲ್ಲಿ ಪಾಲ್ಗೊಳ್ಳುವುದರಿಂದ ಸಮಯ ಪ್ರಜ್ಞೆ, ಏಕಾಗ್ರತೆ ರೂಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ನೂರು ಮೀಟರ್ ಮತ್ತು ನಾನೂರು ಮೀಟರ್ ಓಟ, ಹಗ್ಗ-ಜಗ್ಗಾಟ, ಥ್ರೋಬಾಲ್, ವಾಲಿಬಾಲ್, ಕ್ರಿಕೆಟ್, ಗುಂಡು ಎಸೆತ ಇನ್ನಿತರ ಕ್ರೀಡಾಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಉಪಪ್ರಾಂಶುಪಾಲೆ ಟಿ.ರಂಗನಾಯಕಿ, ಕ್ರೀಡಾ ಸಂಚಾಲಕ ನವೀನ್ ಕುಮಾರ್ ಅವರು ಸಾಥ್ ನೀಡಿದರು.