ಶಿಕ್ಷಣವೆಂದರೆ ಉತ್ತಮ ಅಂಕಪಟ್ಟಿಯೊಂದಿಗೆ ತೇರ್ಗಡೆಯಾಗುವುದರ ಜೊತೆಗೆ ಪಠ್ಯೇತರ ಕ್ರೀಡೆಗಳಲ್ಲಿ ಸಹಭಾಗಿತ್ವ ಹೊಂದಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದೂ ಅತ್ಯಂತ ಮುಖ್ಯವಾಗಿ ಬೇಕಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ಹೇಳಿದರು.
ಹಾನಗಲ್ಲ: ಶಿಕ್ಷಣವೆಂದರೆ ಉತ್ತಮ ಅಂಕಪಟ್ಟಿಯೊಂದಿಗೆ ತೇರ್ಗಡೆಯಾಗುವುದರ ಜೊತೆಗೆ ಪಠ್ಯೇತರ ಕ್ರೀಡೆಗಳಲ್ಲಿ ಸಹಭಾಗಿತ್ವ ಹೊಂದಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದೂ ಅತ್ಯಂತ ಮುಖ್ಯವಾಗಿ ಬೇಕಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ಹೇಳಿದರು.
ಗುರುವಾರ ಪಟ್ಟಣದ ಜನತಾ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಹಾನಗಲ್ಲ ತಾಲೂಕಿನ ಪ್ರೌಢಶಾಲೆಗಳ ಎ-ವಲಯದ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ಆಟಗಳು ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಕೇಂದ್ರಗಳು. ಸದೃಢ ಮನಸ್ಸಿಗೆ ಸದೃಢ ಆರೋಗ್ಯ ಒದಗಿಸಲು ಪಾಠದೊಂದಿಗೆ ಆಟಗಳೂ ಬೇಕೆ ಬೇಕು. ಇದರ ಇನ್ನೊಂದು ಭಾಗವೇ ವ್ಯಾಯಾಮವಾಗಿದೆ. ಕ್ರೀಡೆಗಳು ಸಾಮೂಹಿಕ ಜೀವನದ ಸಹಭಾಗಿತ್ವದ ನಡೆಗೆ ಪ್ರೇರಣಾದಾಯಕವಾಗಿವೆ. ಇದರಲ್ಲಿ ಪ್ರತಿಭೆಯನ್ನು ಪ್ರದರ್ಶಿಸುವ ಒಂದು ಶುದ್ಧ ಚೈತನ್ಯಾತ್ಮಕ ಶಕ್ತಿಯಿದೆ. ಆಟಗಳೆಂದರೆ ಬರೀ ಸ್ಪರ್ಧೆಗಳಲ್ಲ. ಬಂಧುತ್ವದ ಸಮತೋಲಿತ ಶಾರೀರಿಕ ಒಳಗೊಳ್ಳುವಿಕಯಾಗಿದೆ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಜನತಾ ಶಿಕ್ಷಣ ಸೌಹಾರ್ದ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ಆಟಗಳಲ್ಲಿ ಗೆಲುವಿಗಾಗಿ ಪ್ರಯತ್ನ ಎಷ್ಟು ಮುಖ್ಯವೋ ಒಮ್ಮೊಮ್ಮೆ ಸೋಲನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಯಾರಿಗೆ ಸೋಲು-ಗೆಲುವಿನ ನಿರ್ಧಿಷ್ಟ ಕಾರಣ ತಿಳಿದಿರುತ್ತದೆಯೋ ಆತ ಗೆಲುವಿನತ್ತ ದಾಪುಗಾಲು ಹಾಕಬಲ್ಲ. ಆಟದಲ್ಲಿ ದಕ್ಷತೆಯ ಜೊತೆಗೆ ಎಚ್ಚರಿಕೆಯೂ ಬಹುಮುಖ್ಯ. ಪಾಠ-ಆಟಗಳೆರಡೂ ನಮ್ಮ ಬದುಕಿನ ದಾರಿಯನ್ನು ನಿರ್ಧರಿಸುವ ಮುಖ್ಯ ಸಂಗತಿಗಳು ಎಂದರು.
ಸಂಸ್ಥೆಯ ನಿರ್ದೇಶಕ ನಾಗರಾಜ ಉದಾಸಿ ವ್ಹಾಲಿಬಾಲ್ ಸ್ಪರ್ಧೆಗೆ ಚಾಲನೆ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಲಕ್ಷ್ಮೀ ಪಟಗಾರ ಪ್ರತಿಜ್ಞಾವಿಧಿ ಬೋಧಿಸಿದರು. ನಿರ್ದೇಶಕರಾದ ರವಿ ಮೂಡ್ಲಿಯವರ, ಸಿ.ಮಂಜುನಾಥ್, ಯಲ್ಲಪ್ಪ ಶೇರಖಾನಿ, ಭಾಸ್ಕರ ಹುಲಮನಿ, ರೇಖಾ ಶೆಟ್ಟರ, ಬಿ.ಎಸ್. ಕೂಕನಗೌಡ್ರ, ಅಶೋಕ ಹಂಗರಗಿ, ಮಂಜುಳಾ ಬೇದ್ರೆ, ಕಾರ್ಯದರ್ಶಿ ಎಂ.ಎಚ್. ಬಳಿಗಾರ, ಮುಖ್ಯ ಶಿಕ್ಷಕ ಸಿ.ಎಸ್. ಲಂಗಟಿ ಹಾಗೂ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕಿ ಕೆ.ಕೆ. ರೂಪಶ್ರೀ ಸ್ವಾಗತಿಸಿದರು. ಶಿಕ್ಷಕ ನಿರಂಜನ ಗುಡಿ ನಿರೂಪಿಸಿದರು. ಶಿಕ್ಷಕ ಎಸ್.ಜಿ. ಗಿರಿಯಣ್ಣನವರ ವಂದಿಸಿದರು.