ಚಿಕ್ಕಮಗಳೂರು ನಿರಂತರ ಪಠ್ಯ ಚಟುವಟಿಕೆಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಕ್ರೀಡೆಗಳು ಮನೋಲ್ಲಾಸ ನೀಡುವ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುತ್ತವೆ ಎಂದು ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ಹೇಳಿದರು.

ಚಿಕ್ಕಮಗಳೂರು ತಾಲೂಕು ಮಟ್ಟದ ಟೆನ್ನಿಕಾಯ್ಟ್ ಪಂದ್ಯಾವಳಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಿರಂತರ ಪಠ್ಯ ಚಟುವಟಿಕೆಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಕ್ರೀಡೆಗಳು ಮನೋಲ್ಲಾಸ ನೀಡುವ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುತ್ತವೆ ಎಂದು ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ಹೇಳಿದರು.ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಕಳಸಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ಚಿಕ್ಕಮಗಳೂರು ತಾಲೂಕು ಮಟ್ಟದ ಟೆನ್ನಿಕಾಯ್ಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿಟೆನ್ನಿಕಾಯ್ಟ್ ಕ್ರೀಡೆ ಮನೆಮನೆಗಳಲ್ಲೂ ಜನಪ್ರಿಯವಾಗಿದೆ. ನಿರಂತರ ವ್ಯಾಯಾಮಕ್ಕೆ ಸಹಕಾರಿ. ಕ್ರೀಡೆಯಲ್ಲಿ ಕೌಶಲ್ಯ ಬೆಳೆಸಿ ಕೊಂಡವರು ಉತ್ತಮ ಸಾಧನೆ ಮಾಡಬಹುದು. ಕ್ರೀಡಾ ಗೆಲುವು-ಸೋಲಿಗಿಂತ ಭಾಗವಹಿಸುವ ಮನೋಭಾವ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.ಮುಖ್ಯ ಅತಿಥಿ ಲೋಕಾಯುಕ್ತ ಕಚೇರಿ ವಿಜಯಭಾಸ್ಕರ್ ಮಾತನಾಡಿ ಸ್ಪರ್ಧಾ ಮನೋಭಾವದಿಂದ ಕ್ರೀಡೆಯಲ್ಲಿ ತೊಡಗಿಸಿ ಕೊಂಡಾಗ ಯಶಸ್ಸಿನ ಹಸಿವು ಮೂಡುತ್ತದೆ. ಗುರಿ ನಿಗದಿ ಮಾಡಿ ಮುನ್ನಡೆವ ಮೂಲಕ ಸಾಧನೆಯತ್ತ ಹೆಜ್ಜೆ ಇಡಲು ಸಾಧ್ಯ ಎಂದರು.ಕಳಸಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್.ಎಂ. ನಾಗರಾಜರಾವ್ ಮಾತನಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಮಹತ್ವ ನೀಡುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.ಸಮಾರಂಭದಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕ ಮಂಜುನಾಥ್, ಕಳಸಾಪುರ ಕೆಪಿಎಸ್‌ನ ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಪ್ಪ, ಭಾಗ್ಯ, ಸಂಗಮೇಶ್ವರಪೇಟೆಯ ಉಪನ್ಯಾಸಕ ಚಂದನ್ ಸೇರಿದಂತೆ ಉಪಸ್ಥಿತರಿದ್ದರು.ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ರೈತಪರ ಹೋರಾಟಗಾರ ಗುರುಶಾಂತಪ್ಪ, ಪ್ರಾಚಾರ್ಯ ನಾಗರಾಜ ರಾವ್ ಹಾಗೂ ಉಪನ್ಯಾಸಕ ಶಾಂತಕುಮಾರ್ ಎಚ್.ಜಿ. ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.ಎರಡೂ ವಿಭಾಗಗಳಲ್ಲಿ ಪೂರ್ಣಪ್ರಜ್ಞ ಕಾಲೇಜಿಗೆ ಪ್ರಥಮ ಬಾಲಕಿಯರ ಹಾಗೂ ಬಾಲಕರ ಎರಡೂ ವಿಭಾಗಗಳಲ್ಲಿ ಸಂಗಮೇಶ್ವರಪೇಟೆ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡರೆ, ಚಿಕ್ಕಮಗಳೂರಿನ ಬಿಜಿಎಸ್ ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನ ಗಳಿಸಿತು.