ಸಾರಾಂಶ
ಹೊಸಪೇಟೆ: ಸುಮಾರು ಐದು ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ನಗರದ ಸಂಡೂರು ರಸ್ತೆಯಲ್ಲಿರುವ ವಿವೇಕಾನಂದ ಬಡಾವಣೆಯಲ್ಲಿ ವಿಜಯಶ್ರೀ ಸ್ಪೋರ್ಟ್ಸ್ ಜೋನ್ (ಕ್ರಿಕೆಟ್ ಮೈದಾನ)ಗೆ ಬುಧವಾರ ಚಾಲನೆ ನೀಡಿದ ಅವರು, ಮುಂದಿನ ದಿನಗಳಲ್ಲಿ ನಗರದ ಮೈದಾನ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಡಿಎಂಎಫ್ ಅಥವಾ ಕೆಎಂಇಆರ್‌ಸಿ ಅನುದಾನ ಬಳಕೆ ಮಾಡಲಾಗುವುದು. ಇದರಿಂದ ಕ್ರಿಕೆಟ್, ವಾಲಿಬಾಲ್, ಫುಟ್ ಬಾಲ್ ಸೇರಿದಂತೆ ಪ್ರಮುಖ ಕ್ರೀಡೆಗಳ ಮೈದಾನ ಅಭಿವೃದ್ಧಿ ಪಡಿಸಲಾಗುವುದು ಎಂದರು.ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ, ಯುವಜನರು, ದುಶ್ಚಟಗಳಿಗೆ ದಾಸರಾಗಿ, ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಕ್ರೀಡೆಗಳತ್ತ ಮುಖ ಮಾಡುವಂತೆ ಮಾಡಬೇಕಾದ ಅನಿವಾರ್ಯತೆ ಇದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಬಹುದು. ಈ ಹಿನ್ನೆಲೆಯಲ್ಲಿ ವಿಜಯಶ್ರೀ ಸ್ಪೋರ್ಟ್ಸ್ ಜೋನ್, ಕ್ರಿಕೆಟ್ ಮೈದಾನ ಆರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ನಾಗರಿಕರು ಇದರ ಲಾಭ
ಪಡೆಯುವ ಮೂಲಕ ಆರೋಗ್ಯವಂತ ಸದೃಢ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.ಸ್ಪೋರ್ಟ್ಸ್ ಜೋನ್ ನ ನಾಣಿಕೇರಿ ಯಂಕಪ್ಪ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿವೈಎಸ್ಪಿ ಡಾ. ತಳವಾರ ಮಂಜುನಾಥ, ಪೌರಾಯುಕ್ತ ಶಿವಕುಮಾರ್ ಯರಗುಡಿ, ನಗರಸಭೆ ಸದಸ್ಯ ತಾರಿಹಳ್ಳಿ ಜಂಬುನಾಥ, ಆರ್ ಎಫ್ ಓ ಬಸವರಾಜ, ವಾಲ್ಮೀಕಿ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ, ಮಾಜಿ ಅಧ್ಯಕ್ಷ ಗುಜ್ಜಲ ಶ್ರೀನಾಥ್, ನಿರ್ದೇಶಕ ಚಂದ್ರಶೇಖರ, ಜಾಗೃತ ನಾಯಕ ಬಳಗದ ಅಧ್ಯಕ್ಷ ಗುಜ್ಜಲ ಚಂದ್ರಶೇಖರ, ರೈತ ಸಂಘದ ಅಧ್ಯಕ್ಷ ಕಟಗಿ ಜಂಬಯ್ಯ, ಜೆಸ್ಕಾಂನ ಹನುಮಂತಪ್ಪ, ನಾಣಕೇರಿ ರಾಮಣ್ಣ ಮತ್ತಿತರರಿದ್ದರು.