ನರಸಿಂಹರಾಜಪುರಶೆಟ್ಟಿಕೊಪ್ಪದಲ್ಲಿ 8 ಚರ್ಚ್ ಗಳು ಒಟ್ಟಾಗಿ ಕ್ರೀಡಾಕೂಟ ಏರ್ಪಡಿಸಿರುವುದರಿಂದ ಪರಸ್ಪರ ಬಾಂಧವ್ಯ ಬೆಳೆಯಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ತಿಳಿಸಿದರು.

- ಶಟ್ಟಿಕೊಪ್ಪ ಸೇಂಟ್ ಜೋಸೆಫ್ ಚರ್ಚನ ಆಶ್ರಯದಲ್ಲಿ 8 ಚರ್ಚ್ ಗಳ ವಾಲೀಬಾಲ್ , ಥ್ರೋಬಾಲ್ ಕ್ರೀಡಾಕೂಟ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಶೆಟ್ಟಿಕೊಪ್ಪದಲ್ಲಿ 8 ಚರ್ಚ್ ಗಳು ಒಟ್ಟಾಗಿ ಕ್ರೀಡಾಕೂಟ ಏರ್ಪಡಿಸಿರುವುದರಿಂದ ಪರಸ್ಪರ ಬಾಂಧವ್ಯ ಬೆಳೆಯಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ತಿಳಿಸಿದರು.

ಗುರುವಾರ ಶೆಟ್ಟಿಕೊಪ್ಪದ ಬರ್ಕ್ ಮನ್ಸ್ ಪ್ರೌಢ ಶಾಲೆ ಕ್ರೀಡಾಂಗಣದಲ್ಲಿ ಶೆಟ್ಟಿಕೊಪ್ಪ ಸೇಂಟ್ ಜೋಸೆಫ್ ಚರ್ಚನ ನೇತೃತ್ವದಲ್ಲಿ 8 ಚರ್ಚ್ ಗಳ ಪುರುಷರ ವಾಲೀಬಾಲ್ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. 40-50 ವರ್ಷಗಳ ಹಿಂದೆ ಕೇರಳ ರಾಜ್ಯದಿಂದ ಹಲವಾರು ಕ್ರಿಶ್ಚಿಯನ್ ಪಂಗಡದವರು ವಲಸೆ ಬಂದು ನರಸಿಂಹರಾಜಪುರದಲ್ಲಿ ವಾಸ ಮಾಡುತ್ತಿದ್ದೇವೆ. ಆದರೆ, ಎಲ್ಲಾ ಕ್ರಿಶ್ಚಿಯನ್ ಪಂಗಡದವರ ಆಚಾರ, ವಿಚಾರ ಒಂದೇ ರೀತಿ ಇದೆ.ಇದೇ ರೀತಿ ಚರ್ಚಗಳನ್ನು ಸೇರಿಸಿ ಆಟೋಟ ಸ್ಪರ್ಧೆ ಏರ್ಪಡಿಸುವುದರಿಂದ ಒಡನಾಟ, ಪ್ರೀತಿ ಹೆಚ್ಚಾಗುತ್ತದೆ. ಪರಸ್ಪರ ಸೌಹಾರ್ದತೆಯಿಂದ ಬದುಕಿದರೆ ನಮ್ಮ ಸಮಾಜ ಸದೃಢವಾಗಲಿದೆ ಎಂದರು.

ಅತಿಥಿಯಾಗಿದ್ದ ತಾಲೂಕು ವೈ.ಎಂಸಿಎ ತಾಲೂಕು ಅಧ್ಯಕ್ಷ ಎಂ.ಪಿ. ಮನು ಮಾತನಾಡಿ, ನಾವು ಆರೋಗ್ಯವಾಗಿರ ಬೇಕಾದರೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ನಮ್ಮ ದೇಹದಲ್ಲಿ ಸಾವಿರಾರು ಸ್ನಾಯುಗಳು, ಜೀರ್ಣಾಂಗ, ಮೆದುಳು, ಮೂಳೆಗಳಿಗೂ ವ್ಯಾಯಾಮ ಬೇಕಾಗುತ್ತದೆ. ಪ್ರತಿ ನಿತ್ಯ ಯಾವುದಾದರೂ ಕ್ರೀಡೆಯಲ್ಲಿ ಭಾಗವಹಿಸುತ್ತಾ ಬಂದರೆ ಆರೋಗ್ಯ ಹೆಚ್ಚಾಗಲಿದೆ. ಪ್ರಸ್ತುತ ದಿನಗಳಲ್ಲಿ ಸಣ್ಣ ಕಾಯಿಲೆಗಳಿಗೂ ಮಾತ್ರೆ ತಿನ್ನುತ್ತಿದ್ದೇವೆ. ಇದನ್ನು ಕಡಿಮೆ ಮಾಡಿ ಯೋಗ, ಧ್ಯಾನ, ಆಟೋಟಗಳಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ಕೆಎಂಸಿಎ ತಾಲೂಕು ಅಧ್ಯಕ್ಷ ಎಲ್ದೋ ಮಾತನಾಡಿ ಹೆಚ್ಚಾಗಿ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿದ್ದ ಚರ್ಚ್ ಗಳು ಈಗ ಕ್ರೀಡಾಕೂಟ ನಡೆಸುತ್ತಿರುವುದು ಸಂತಸ ತಂದಿದೆ. ಎಲ್ಲಾ ಚರ್ಚಗಳನ್ನು ಈ ಕ್ರೀಡಾಕೂಟ ಒಗ್ಗೂಡಿಸುತ್ತಿದೆ. ಎಲ್ಲರೂ ಒಟ್ಟಾಗಿ ಇದ್ದರೆ ನಮ್ಮ ಸಮಾಜದ ಶಕ್ತಿ ಹೆಚ್ಚಾಗಲಿದೆ. ನಮ್ಮ ಧರ್ಮ ಕಾಪಾಡಿಕೊಂಡು ಬೇರೆ ಧರ್ಮವನ್ನು ಗೌರವದಿಂದ ಕಾಣಬೇಕು. ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬೆಳೆದಿದ್ದರೂ ಕ್ರೀಡೆ ಮಹತ್ವ ಮಾತ್ರ ಕಡಿಮೆಯಾಗಿಲ್ಲ. ಕ್ರೀಡೆಯಲ್ಲಿ ಸೋಲು, ಗೆಲವು ಇದ್ದೇ ಇರುತ್ತದೆ. ಭಾಗವಹಿಸುವುದು ಮುಖ್ಯ ಎಂದರು.

ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ಇಂದು ಎಲ್ಲಾ ಚರ್ಚಗಳು ಒಟ್ಟಾಗಿ ಕ್ರೀಡಾಕೂಟ ನಡೆಸುತ್ತಿರುವುದರಿಂದ ನಾವೆಲ್ಲರೂ ಒಂದು ಎಂದು ತೋರಿಸಿದ್ದೇವೆ. ವಿವಿದೆಯಲ್ಲಿ ಏಕತೆ ಕಂಡಿದ್ದೇವೆ.ಕೇರಳದಿಂದ ವಲಸೆ ಬಂದ ಎಲ್ಲಾ ಕ್ರೈಸ್ತ ಬಾಂಧವರು ಇಲ್ಲಿನ ನೆಲ, ಮಣ್ಣು, ಭಾಷೆಗೆ ಹೊಂದಿಕೊಂಡಿದ್ದೇವೆ. ಗುರುಗಳ ಮಾರ್ಗದರ್ಶನದಲ್ಲಿ ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬಂದಿದ್ದೇವೆ ಎಂದರು.

ಶೆಟ್ಟಿಕೊಪ್ಪದ ಸೇಂಟ್ ಜೋಸೆಫ್ ಚರ್ಚನ ಫಾ.ಸೆಬಾಸ್ಟಿನ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ, ಕರುಗುಂದ ಚರ್ಚನ ಧರ್ಮ ಗುರು ಫಾ.ಶನೋಜ, ಗ್ರಾಪಂ ಸದಸ್ಯೆ ಅಶ್ವಿನಿ ಮತ್ತಿತರರು ಇದ್ದರು.

ಪುರುಷರ ವಾಲೀಬಾಲ್ ಪಂದ್ಯಾವಳಿಯಲ್ಲಿ ಮಾಕೋಡು ಚರ್ಚ್ ಪ್ರಥಮ ಸ್ಥಾನ, ಲಿಟಲ್ ಪ್ಲವರ್ ಚರ್ಚ್ ದ್ವಿತೀಯ ಹಾಗೂ ಮೆಣಸೂರು ಕ್ಯಾಥೋಲಿಕ್ ಚರ್ಚ ತೃತೀಯ ಸ್ಥಾನ ಪಡೆಯಿತು. ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಶೆಟ್ಟಿಕೊಪ್ಪ ಸೇಂಟ್ ಚರ್ಚ ಪ್ರಥಮ ಸ್ಥಾನ, ಸೂಸಲವಾನಿ ಚರ್ಚ್ ದ್ವಿತೀಯ ಸ್ಥಾನ ಪಡೆಯಿತು.