ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಬೀನು ಬಾಟ್, ರಾಜು ಬಾಗಡೆ, ವಿಲಾಸ ನೀಲಗುಂದ, ಹರೀಶ ಮುಟಗಾರ, ಪ್ರೇಮಾ ಹುಚ್ಚಣ್ಣವರ, ನೀಲಮ್ಮ ಮಲ್ಲಿಗವಾಡ ಸೇರಿದಂತೆ ಹಲವಾರು ಕ್ರೀಡಾಪಟುಗಳು ವಿದ್ಯಾರ್ಥಿಗಳಿಗೆ ಮಾದರಿಯಾಗಲಿ.
ಗದಗ: ಜಿಲ್ಲೆಯಲ್ಲಿ ಬೆಂಗಳೂರು ಹೊರತುಪಡಿಸಿ ಅತ್ಯುತ್ತಮವಾದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ, ಮಹಾತ್ಮ ಗಾಂಧಿ ಕ್ರೀಡಾಂಗಣ ಸೇರಿದಂತೆ ಉನ್ನತಮಟ್ಟದ ಕ್ರೀಡಾ ಸೌಲಭ್ಯಗಳಿದ್ದು, ಇವುಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿರುವ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ತಿಳಿಸಿದರು.ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಕುಸ್ತಿ ಮನೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಎರಡು ದಿನ 15, 17 ಮತ್ತು 23 ವರ್ಷ ವಯೋಮಿತಿಯೊಳಗಿನ ಬಾಲಕ, ಬಾಲಕಿಯರಿಗೆ ಏರ್ಪಡಿಸಿದ್ದ ಅಂತರ ಜಿಲ್ಲಾ ಮಟ್ಟದ ಕ್ರೀಡಾ ವಸತಿನಿಲಯದ ಕುಸ್ತಿ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಬೀನು ಬಾಟ್, ರಾಜು ಬಾಗಡೆ, ವಿಲಾಸ ನೀಲಗುಂದ, ಹರೀಶ ಮುಟಗಾರ, ಪ್ರೇಮಾ ಹುಚ್ಚಣ್ಣವರ, ನೀಲಮ್ಮ ಮಲ್ಲಿಗವಾಡ ಸೇರಿದಂತೆ ಹಲವಾರು ಕ್ರೀಡಾಪಟುಗಳು ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದರು.ಈ ಕುಸ್ತಿ ಪಂದ್ಯಾವಳಿಯಲ್ಲಿ ಗದಗ, ಶಿವಮೊಗ್ಗ, ಬಾಗಲಕೋಟೆ, ಧಾರವಾಡ, ದಾವಣಗೆರೆ, ಉತ್ತರಕನ್ನಡ, ಬೆಳಗಾವಿ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು, ಕ್ರೀಡಾ ವಸತಿನಿಲಯದಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾ ಪಟುಗಳಾಗಿರುವ ಪ್ರತಿಭೆ ಹೊರಬರಲು ಈ ಕ್ರೀಡಾಕೂಟ ಅನುಕೂಲಕರವಾಗಿದೆ. ಕ್ರೀಡಾಕೂಟವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಊಟ, ವಸತಿ, ಕ್ರೀಡಾಕೂಟದ ಆಯೋಜನೆ ಅಚ್ಚುಕಟ್ಟಾಗಿ ಮಾಡಿದ್ದು ಶ್ಲಾಘನೀಯ ಎಂದರು.
ಕರ್ನಾಟಕ ಕುಸ್ತಿ ಅಸೋಸಿಯೇಷನ್ ನಿರ್ಣಾಯಕರ ತಂಡದ ಮುಖ್ಯಸ್ಥ ಡಾ. ವಿನೋದಕುಮಾರ ಮಾತನಾಡಿ, ಈಗಿನ ಕಾಲಮಾನದಲ್ಲಿ ಕ್ರೀಡೆಗಾಗಿ ಸಾಕಷ್ಟು ಅನುಕೂಲಗಳಿದ್ದು, ಅದರ ಉಪಯೋಗ ಪಡೆದುಕೊಂಡು ಕುಸ್ತಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಗದಗ ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾ ಸೌಲಭ್ಯಗಳಿವೆ ಎಂದರು.ಈ ವೇಳೆ ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ವಸಂತ ಸಿದ್ದಮ್ಮನಹಳ್ಳಿ, ತರಬೇತುದಾರರಾದ ರಾಜು ಫಳಕೆ, ನಾಗರಾಜ, ಶಿವಾನಂದ, ಮಂಜು ಬಾಗಡೆ, ವಿದ್ಯಾ ಕುಲಕರ್ಣಿ, ರೂಪಾ ಗೌಡರ ಸೇರಿದಂತೆ ತರಬೇತುದಾರರು, ಕ್ರೀಡಾಪಟುಗಳು ಇದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಸ್ವಾಗತಿಸಿದರು. ಎಂ.ಎ. ಯರಗುಡಿ ನಿರೂಪಿಸಿ, ವಂದಿಸಿದರು.