ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲೆಯ ಯುವಕ್ರೀಡಾ ಪ್ರತಿಭಾ ಶೋಧ ಹಾಗೂ ಜಿಲ್ಲೆಯ ಕ್ರೀಡಾಲೋಕವನ್ನು ವಿಸ್ತರಿಸುವ ಮತ್ತು ಉತ್ತೇಜಿಸುವ ಆಶಯದಿಂದ ಅ.5 ರಿಂದ 7 ರವರೆಗೆ ಕ್ರೀಡಾಕೂಟ ನಡೆಯಲಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ತಿಳಿಸಿದರು.ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಅ.5 ರಿಂದ ನಡೆಯಲಿರುವ ಕ್ರೀಡಾ ಜಾತ್ರೆಯ ಮಾಹಿತಿ ನೀಡಿ ಮಾತನಾಡಿದ ಶ್ರೀಗಳು, ಕ್ರೀಡಾಕೂಟದಲ್ಲಿ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 17 ವರ್ಷದೊಳಗಿನ 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಕಬಡ್ಡಿ, ಖೋ ಖೋ, ಹ್ಯಾಂಡ್‍ಬಾಲ್, ವಾಲಿಬಾಲ್ ಕ್ರೀಡೆಗಳು ಹಾಗೂ ಮಹಿಳೆಯರಿಗಾಗಿ ಹಗ್ಗ-ಜಗ್ಗಾಟ, ಮ್ಯೂಜಿಕಲ್ ಚೇರ್, ಮಡಿಕೆ ಹೊಡೆಯುವುದು, ಬಕೆಟ್ ಇನ್ ದ ಬಾಲ್, ಥ್ರೋಬಾಲ್, ಶರಣ-ಶರಣೆಯರ ವೇಷಭೂಷಣ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಜಯದೇವ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಯಲ್ಲಿ ಇರುವವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು. ಶ್ರೀಗಳ ಸತ್ಕಾರ್ಯಗಳನ್ನು ನಾಡಿಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದರು.ಅ.5ರ ಬೆಳಿಗ್ಗೆ 10ಕ್ಕೆ ಜಯದೇವ ಕಪ್ ಕ್ರೀಡಾಕೂಟ ಅಂಗವಾಗಿ ಮೋಟಾರ್ ಬೈಕ್ ಜಾಥಾ ನಡೆಯಲಿದ್ದು, ನಗರಸಭೆ ಅಧ್ಯಕ್ಷೆ ಸುಮಿತ ರಾಘವೇಂದ್ರ ಜಾಥಾವನ್ನು ಉದ್ಘಾಟಿಸುವರು. ಮಧ್ಯಾಹ್ನ 4 ಗಂಟೆಗೆ ಜಯದೇವ ಕಪ್ ಪಂದ್ಯಾವಳಿ ಅಂಗವಾಗಿ, ಅಂಬೇಡ್ಕರ್ ವೃತ್ತದಲ್ಲಿ ಶ್ರೀ ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನ ಪ್ರಾರಂಭವಾಗಲಿದ್ದು, ಸಂಸದ ಗೋವಿಂದ ಎಂ. ಕಾರಜೋಳರವರು ಪಥ ಸಂಚಲನವನ್ನು ಉದ್ಘಾಟಿಸುವರು. ಸಂಜೆ 6 ಗಂಟೆಗೆ ನಡೆಯುವ ಶ್ರೀ ಜಯದೇವ ಕಪ್ ಹೊನಲು ಬೆಳಕಿನ ಕ್ರೀಡಾಕೂಟವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಉದ್ಘಾಟಿಸುವರು. ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮತ್ತು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಇರಲಿದ್ದು, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮೊದಲಾದವರು ಭಾಗವಹಿಸುವರು ಎಂದು ತಿಳಿಸಿದರು.
ಅ.6 ರಂದು ಮಹಿಳಾ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳು ನಡೆಯಲಿವೆ. ಅ. 7 ರಂದು ಸಂಜೆ 6 ಗಂಟೆಗೆ ಜಯದೇವ ಕಪ್ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದ್ದು, ಅಥಣಿ ಶ್ರೀ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮಿಗಳು ಸಾನಿದ್ಯ ವಹಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಜೇತರಿಗೆ ಬಹುಮಾನ ವಿತರಣೆ ಮಾಡುವರು. ಮುಖ್ಯಅತಿಥಿಗಳಾಗಿ ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಮುರುಳೀಧರ ಹಾಲಪ್ಪ ಇತರರು ಪಾಲ್ಗೊಳ್ಳುವರು ಎಂದರು.ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಕ್ರೀಡಾಪಟುಗಳಿಗೆ ವಸತಿ ಊಟ ನೀಡಲಾಗುವುದು. ಮಹಿಳೆಯರಿಗಾಗಿ ಪ್ರತ್ಯೇಕ ಕ್ರೀಡೆಗಳು ನಡೆಯಲಿದೆ ಎಂದರು.
ಕ್ರೀಡಾಕೂಟದ ಉಪಾಧ್ಯಕ್ಷ ಕೆ.ಸಿ. ನಾಗರಾಜ್ ಮಾತನಾಡಿ, ಈ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳ ಸುಮಾರು 58 ತಂಡಗಳು ಭಾಗವಹಿಸಲಿವೆ. ಕ್ರೀಡಾಕೂಟದ ಪ್ರಾರಂಭ ಹಾಗೂ ಮುಕ್ತಾಯ ದಿನದಂದು ಅರ್ಥ ಪೂರ್ಣವಾದ ವರ್ಣ ರಂಜಿತವಾದ ಕಾರ್ಯಕ್ರಮ ನಡೆಯಲಿವೆ . ಇದರಲ್ಲಿ ಜಯದೇವ ಶ್ರೀಗಳ ಜೀವನ ಚರಿತೆ ಲೇಸರ್ ಮೂಲಕ ನೋಡುಗರಿಗೆ ತಲುಪಿಸಲಾಗುತ್ತದೆ ಎಂದರು.ಪತ್ರಿಕಾಗೋಷ್ಟಿಯಲ್ಲಿ ಕ್ರೀಡಾಕೂಟದ ಸಮಿತಿ ಅಧ್ಯಕ್ಷ ಶ್ರೀರಾಮ್, ಹನೀಫ್, ಮಂಜುನಾಥ್, ಪ್ರಕಾಶ್ ರಾಮ್ ನಾಯ್ಕ್, ಖುದ್ದುಸ್, ವೀರೇಂದ್ರಕುಮಾರ್, ಪೈಲಟ್ ನಾಗರಾಜ್, ಫ್ರಕೃದ್ದಿನ್ ಇತರರು ಹಾಜರಿದ್ದರು.
- - --ಚಿತ್ರ 1,2: ಪತ್ರಿಕಾಗೋಷ್ಠಿಯಲ್ಲಿ ಮುರುಘರಾಜೇಂದ್ರ ಬ್ರಹನ್ಮಠ, ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿದರು.