ಕ್ರೀಡೆಗಳು ಕೇವಲ ಗೆಲುವು-ಸೋಲಿಗೆ ಸೀಮಿತವಾಗಿರದೆ, ಮಕ್ಕಳಲ್ಲಿ ಶಿಸ್ತು, ಸಹನೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ

ಕನ್ನಡಪ್ರಭ ವಾರ್ತೆ ಗದಗ

ಕ್ರೀಡೆಗಳು ಕೇವಲ ಗೆಲುವು-ಸೋಲಿಗೆ ಸೀಮಿತವಾಗಿರದೆ, ಮಕ್ಕಳಲ್ಲಿ ಶಿಸ್ತು, ಸಹನೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯು ಪಠ್ಯದ ಜೊತೆಗೆ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ತಿಳಿಸಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಗ್ರಾಮೀಣ ವಲಯದ ಸಂಯುಕ್ತಾಶ್ರಯದಲ್ಲಿ ನಡೆದ 2026-27ನೇ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡಾಪಟುಗಳಿಗೆ ಪ್ರೋತ್ಸಾಹದ ಅಗತ್ಯವಿದೆ. ಮುಂದಿನ ವರ್ಷದೊಳಗಾಗಿ ಈ ಕ್ರೀಡಾಂಗಣ ಪುಟ್ಬಾಲ್ ಕ್ರೀಡಾಂಗಣವಾಗಿ ಹಸಿರಿನಿಂದ ಕಂಗೊಳಿಸಲಿದ್ದು, ರಾಷ್ಟ್ರಮಟ್ಟದಲ್ಲಿ ಆಟವಾಡುವ ಮೈದಾನವಾಗಲಿದೆ. 6 ಲೈನ್ ಟ್ರ್ಯಾಕ್ ನಿಂದ 8 ಲೈನ್ ಟ್ರ್ಯಾಕ್ ಆಗಿ ಬದಲಾಗಲಿದೆ. ಎಲ್ಲಾ ಕ್ರೀಡಾಪಟುಗಳು ಇದರ ಸದುಪಯೋಗ ಪಡೆಯಬೇಕು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜ ಬಳ್ಳಾರಿ ಮಾತನಾಡಿ, ಶಾಲಾ ಹಂತದಿಂದಲೇ ಕ್ರೀಡಾಸಕ್ತಿ ಬೆಳೆಸಿಕೊಂಡರೆ ಭವಿಷ್ಯದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಇಂತಹ ಕೂಟಗಳು ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಎಲ್ಲ ಕ್ರೀಡೆಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದ್ದು ಪ್ರತಿಯೊಬ್ಬ ಮಕ್ಕಳು ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ. ಪಾಲಕರು ಮತ್ತು ದೈಹಿಕ ಶಿಕ್ಷಕರು ಮಕ್ಕಳಿಗೆ ಕ್ರೀಡೆಗಳ ಬಗ್ಗೆ ಪ್ರೋತ್ಸಾಹ ನೀಡಬೇಕು ಎಂದರು.

ಈ ವೇಳೆ ಜೆ.ವಿ. ಬಾವಿಕಟ್ಟಿ, ಗಾಯತ್ರಿದೇವಿ, ಬಿ.ಎಫ್. ಪೂಜಾರ, ವಿ.ಎಂ. ಹಿರೇಮಠ, ರಾಜು ಚವಾಣ, ವಸಂತ ಕಲಕಂಬ, ಎಸ್.ಆರ್. ಬಂಡಿ, ರವಿರಾಜ ಪವಾರ, ಎಸ್.ಬಿ. ಆಲೂರ, ಡಿ.ಎಸ್. ತಳವಾರ, ಚಂದ್ರು ಮೇಲಿನಮನಿ, ಎಫ್.ಎಂ. ಮುಶಣ್ಣವರ, ಎನ್.ಎಚ್. ಪಾಟೀಲ, ಸುರೇಶ ಕೊಪ್ಪದ, ಅಜ್ಜಪ್ಪ ಹುಗ್ಗೆಣ್ಣವರ ಸೇರಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ದೈಹಿಕ ಶಿಕ್ಷಕರು, ಕ್ರೀಡಾಪಟುಗಳು ಇದ್ದರು. ಶಾರದಾ ಬಂಡಿ ಪ್ರಾರ್ಥಿಸಿದರು. ನೆರವೇರಿಸಿದರು. ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕಿ ಪಿ.ಕೆ. ಅವರಡ್ಡಿ ಸ್ವಾಗತಿಸಿದರು. ಮಹಾಂತೇಶ ಪೂಜಾರ ನಿರೂಪಿಸಿದರು. ಶಾರದಾ ಬಂಡಿ ವಂದಿಸಿದರು.