ಸಾರಾಂಶ
ಚಿತ್ರರ್ದುರ್ಗ: ಪ್ರಸ್ತುತ ದಿನಗಳಲ್ಲಿ ರಾಜಕಾರಣಿಗಳು, ನಟರು, ಅಧಿಕಾರಿಗಳಾಗುವುದು ಸುಲಭ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಗೌರವ ತರುವಂತ ಕ್ರೀಡಾಪಟುಗಳಾಗುವುದು ಕಷ್ಟ ಎಂದು ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ ಅಭಿಪ್ರಾಯಪಟ್ಟರು. ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರ ಸಂಘ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂತೆಬೆನ್ನೂರು ಸಂಯುಕ್ತಾಶ್ರಯದಲ್ಲಿ ಇಲ್ಲಿನ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಂಡ ದಾವಣಗೆರೆ ವಿವಿ ಅಂತರ ಕಾಲೇಜು ಪುರುಷರ ಹಾಗೂ ಮಹಿಳೆಯರ 13ನೇ ಅಥ್ಲೆಟಿಕ್ಸ್ ಕ್ರೀಡಾಕೂಟ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯದ ತಂಡದ ಆಯ್ಕೆ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋತವರು ಕುಗ್ಗದೆ, ಗೆದ್ದವರು ಹಿಗ್ಗದೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಗೆ ಯಾವುದೇ ಜಾತಿ ಧರ್ಮದ ಹಂಗಿಲ್ಲ ಎಂದರು.
ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಶಾಲಾ-ಕಾಲೇಜುಗಳಲ್ಲಿ 25ರಷ್ಟು ಹಾಜರಾತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಶೇ.2ರಷ್ಟು ಮೀಸಲಾತಿ, ಹತ್ತು ಗ್ರೇಸ್ ಅಂಕ ಸಿಗಲಿದೆ ಎಂದ ಅವರು, ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 65 ಎಕರೆ ಜಾಗವಿದ್ದು, ಸಿಂಥೆಟಿಕ್ ಟ್ರ್ಯಾಕ್‍ನೊಂದಿಗೆ ವಿಶಾಲವಾದ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ತಿಳಿಸಿದರು.ಆಧುನಿಕ ಜೀವನದಲ್ಲಿ ಎಲ್ಲದರಲ್ಲೂ ಒತ್ತಡವಿದೆ. ರೋಗಗಳನ್ನು ತಡೆಗಟ್ಟಿ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಬೇಕಾದರೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು. ಸ್ಪರ್ಧಾತ್ಮಕ ಯುಗವಾಗಿರುವುದರಿಂದ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ಭಾಗವಹಿಸಬೇಕಾದರೆ ಸತತ ಅಭ್ಯಾಸವಿರಬೇಕು. ರಾಜ್ಯದ ಕ್ರೀಡಾಪಟುಗಳು ಒಲಂಪಿಕ್ಸ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ತಂದವರಿಗೆ ಆರು ಕೋಟಿ ರು. ಬೆಳ್ಳಿ ಪದಕ ಗೆದ್ದವರಿಗೆ ನಾಲ್ಕು ಕೋಟಿ ರು.ಗಳನ್ನು ರಾಜ್ಯ ಸರ್ಕಾರ ನೀಡಲಿದೆ ಎಂದರು. ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಎಚ್.ತಿಪ್ಪೇಸ್ವಾಮಿ ಮಾತನಾಡಿ, ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯಿರುವುದರಿಂದ ಕ್ರೀಡಾಪಟುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸೌಲಭ್ಯಗಳ ಕೊರತೆಯಿಂದಾಗಿ ಕ್ರೀಡಾಪಟುಗಳು ಹೆಚ್ಚಿನ ಪದಕಗಳನ್ನು ಬಾಚಿಕೊಳ್ಳಲು ಆಗುತ್ತಿಲ್ಲ. ಕ್ರೀಡೆಯಲ್ಲಿ ಭಾಗವಹಿಸುವವರಿಗೆ ಐವತ್ತರಷ್ಟು ಹಾಜರಾತಿಯನ್ನು ಶಾಲಾ-ಕಾಲೇಜುಗಳಲ್ಲಿ ಕೊಡಬೇಕು ಎಂದು ಒತ್ತಾಯಿಸಿದರು. ಕ್ರೀಡಾಕೂಟದ ಕಾರ್ಯದರ್ಶಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ.ವೀರೇಂದ್ರ.ಕೆ.ಎಂ ಮಾತನಾಡಿ, 2007ರಲ್ಲಿ ಸಂತೆಬೆನ್ನೂರಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭವಾಯಿತು. ಈ ವರ್ಷ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ನಡೆಸುತ್ತಿದ್ದೇವೆ. ವಾಲಿಬಾಲ್ ಕ್ರೀಡೆಯನ್ನು ಆಡಿಸಲಾಗುವುದು. ನಮ್ಮ ಕಾಲೇಜಿನ ಕ್ರೀಡಾಪಟುಗಳನ್ನು ರಾಜ್ಯ ರಾಷ್ಟ್ರಮಟ್ಟಕ್ಕೆ ಪರಿಚಯಿಸಬೇಕೆಂಬುದು ನಮ್ಮ ಆಸೆ ಎಂದರು.ಇದೇ ವೇಳೆ ಕ್ರೀಡಾ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.
ಸಿಂಡಿಕೇಟ್ ಸದಸ್ಯರುಗಳಾದ ಡಾ.ಬಿ.ಕೆ.ಪ್ರೇಮ, ಪ್ರಶಾಂತ್.ಆರ್.ಟಿ, ಡಾ.ಪ್ರಶಾಂತ್.ಎನ್.ಸಿ, ಸಂತೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಗಿರಿಸ್ವಾಮಿ.ಎಚ್ ಇದ್ದರು.