ಜನಾಂಗದವರನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗೆ ಇದೆ: ಎ.ಎಸ್‌.ಶಾಸಕ

| Published : Aug 18 2025, 12:01 AM IST

ಸಾರಾಂಶ

ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದೆ. ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗೆ ಇದೆ ಎಂದು ಶಾಸಕರು ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಗ್ರಾಮೀಣ ಮಟ್ಟದಲ್ಲಿ ಹಲವು ಪ್ರತಿಭೆಗಳಿವೆ, ಇವರನ್ನು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವಂತಹ ಸ್ಪರ್ಧಿಗಳನ್ನಾಗಿ ತಯಾರು ಮಾಡುವಂತಹ ಜವಾಬ್ದಾರಿ ಸಂಘ ಸಂಸ್ಥೆಗಳ ಮೇಲಿದೆ ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು. ಇಲ್ಲಿನ ಹಿಂದೂ ಮಲಯಾಳಿ ಸಂಘದ ವತಿಯಿಂದ ಸಮಸ್ತ ಹಿಂದೂ ಬಾಂಧವರಿಗಾಗಿ ಭಾನುವಾರ ಸಮೀಪದ ಹಳೆ ತಾಲೂಕಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದೆ. ಎಲ್ಲಾ ಸಮಾಜದವರನ್ನು, ಜನಾಂಗದವರನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಿದೆ. ದೇಶಕ್ಕೆ ದೊಡ್ಡ ಕೊಡುಗೆಯನ್ನು ಜಿಲ್ಲೆಯ ಕ್ರೀಡಾಪಟುಗಳು ನೀಡಿದ್ದಾರೆ. ಮತ್ತಷ್ಟು ಕ್ರೀಡಾ ಪ್ರತಿಭೆಗಳನ್ನು ಹೊರ ತರುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಪ್ರಮುಖವಾದದ್ದು ಎಂದರು. ನಾಡಿನ ಸಮಸ್ತ ದೇವಾನುದೇವತೆಗಳು ಯುವಕರಿಗೆ, ಮಕ್ಕಳಿಗೆ ಉತ್ತಮ ಭವಿಷ್ಯ ನೀಡಲಿ. ಉತ್ತಮ ಮಳೆ-ಬೆಳೆಯಾಗಿ ನಾಡು ನಾಡುಸಮೃದ್ದಿಯಿಂದ ಕೂಡಿರಲಿ ಎಂದರು.ಸ್ಥಳೀಯ ಗ್ರಾಮೀಣ ನಿವಾಸಿಗಳು ಶತಮಾನಗಳಿಂದ ಹಗ್ಗಜಗ್ಗಾಟದಂತಹ ಹಲವು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ. ಇಂತಹ ಕ್ರೀಡೆಗಳು ಗ್ರಾಮೀಣ ಸೊಬಗನ್ನು ಎತ್ತಿ ಹಿಡಿಯುವುದರೊಂದಿಗೆ ಜನರಲ್ಲಿ ಒಗ್ಗಟ್ಟು ಮೂಡಿಸಿ ಸಾಮರಸ್ಯ ಮೂಡಿಸಲು ಸಹಕಾರಿಯಾಗಿದೆ. ಬಹುತೇಕ ಕೃಷಿಕರಾಗಿರುವ ಗ್ರಾಮೀಣ ಜನತೆಗೆ ಇಂತಹ ಕ್ರೀಡಾಕೂಟಗಳು ಮನೋರಂಜನೆ ಹಾಗೂ ಮನೋಸ್ಥೈರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಎ.ಕೆ ಮಾತನಾಡಿ, ತಾನು ಈ ಹಿಂದೆ ವಾಗ್ದಾನ ನೀಡಿದಂತೆ ಸಂಘಕ್ಕೆ 50 ಸಾವಿರ ರು. ದೇಣಿಗೆ ನೀಡಲಿರುವುದಾಗಿ ಹೇಳಿದರು.ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಬೇಬ ಮಾತನಾಡಿ, ಇಲ್ಲಿನ ಆಟದ ಮೈದಾನಕ್ಕೆ 150 ವರ್ಷಗಳ ಇತಿಹಾಸವಿದೆ ಎಂದರು.ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಅನಿಲ್ ಕೆ ಕೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಅಧ್ಯಕ್ಷ ಎ.ಕೆ. ಚಂದ್ರ, ದಾನಿಗಳು, ಕಾಫಿ ಬೆಳೆಗಾರರಾದ ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ, ದಾನಿಗಳಾದ ಚೀಯಕಪೂವಂಡ ಎಸ್. ಮಂಜುನಾಥ್ (ಕಟ್ಟಿ), ಗ್ರಾಮ ಪಂಚಾಯಿತಿ ಸದಸ್ಯರಾದ ಮಾಚೇಟಿರ ಕುಸು ಕುಶಾಲಪ್ಪ, ಹೇಮಾ ಅರುಣ್, ಪ್ರತೀಪ ಬಿ ಎಂ, ಕಲಿಯಂಡ ಸಂಪನ್ ಅಯ್ಯಪ್ಪ, ಹಿಂದೂ ಮಲಯಾಳಿ ಸಂಘದ ಸಲಹೆಗಾರ ರಘು ಅಜಿಮುಟ್ಟ ಮತ್ತಿತರರಿದ್ದರು.ದೇವಸ್ಮಿತ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದ ನಿರೂಪಣೆ ಮತ್ತು ವೀಕ್ಷಕ ವಿವರಣೆಯನ್ನು ರವಿ ಓಂಕಾರ್, ಪ್ರಸಾದ ಹಾಗೂ ಶೈಲಾ ನಿರ್ವಹಿಸಿ ಅನಿಲ್ ಕೆ ಕೆ ವಂದಿಸಿದರು.ಇದಕ್ಕೂ ಮೊದಲು ಕೇರಳದ ಚೆಂಡ ಮೇಳ ಹಾಗೂ ಸಾಂಪ್ರದಾಯಿಕ ಉಡುಗೆ-ತೊಡುಗೆಗಳೊಂದಿಗೆ ಅತಿಥಿಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಿಕೊಳ್ಳಲಾಯಿತು.ಆ ಬಳಿಕ ಶ್ರೀ ಈಶ್ವರ ಇ ಗ್ಗುತ್ತಪ್ಪ ಎ ಮತ್ತು ಬಿ ತಂಡಗಳ ಹಗ್ಗ ಜಗ್ಗಾಟ ಸ್ಪರ್ಧೆಯೊಂದಿಗೆ ಚಾಲನೆ ನೀಡಲಾಯಿತು.