ಕ್ರೀಡೆಗಳು ಕೇವಲ ಗೆಲುವು-ಸೋಲಿನ ಸ್ಪರ್ಧೆಗಳಲ್ಲ, ಅವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮಹತ್ವದ ವೇದಿಕೆಗಳಾಗಿವೆ

ಹೂವಿನಹಡಗಲಿ: ವಿದ್ಯಾರ್ಥಿಗಳಲ್ಲಿ ಕ್ರೀಡೆಗಳು ಕ್ರೀಡಾಸ್ಫೂರ್ತಿ,ನಾಯಕತ್ವ ಗುಣ, ಶಿಸ್ತು ಆತ್ಮವಿಶ್ವಾಸ ಬೆಳೆಸುತ್ತವೆ ಎಂದು ಶಾಸಕ ಕೃಷ್ಣನಾಯಕ ಹೇಳಿದರು.

ಪಟ್ಟಣದ ಸೊಪ್ಪಿನ ಕಾಳಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆಗಳು ಕೇವಲ ಗೆಲುವು-ಸೋಲಿನ ಸ್ಪರ್ಧೆಗಳಲ್ಲ, ಅವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮಹತ್ವದ ವೇದಿಕೆಗಳಾಗಿವೆ ಎಂದ ಅವರು, ಕ್ರೀಡೆಗಳಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ, ತಂಡದ ಮನೋಭಾವ ಮತ್ತು ನಾಯಕತ್ವ ಗುಣಗಳು ಬೆಳೆಯುತ್ತವೆ. ವಿಶೇಷವಾಗಿ ವಿದ್ಯಾರ್ಥಿನಿಯರು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಜಿಲ್ಲಾ,ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವತ್ತ ಗಮನಹರಿಸಬೇಕು ಎಂದು ಕರೆ ನೀಡಿದರು.

ಇಂತಹ ಕ್ರೀಡಾಕೂಟ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ, ಉತ್ತಮ ಅವಕಾಶ ಕಲ್ಪಿಸುತ್ತಿರುವ ಆತಿಥೇಯ ಕಾಲೇಜಿನ ಕಾರ್ಯ ಶ್ಲಾಘಿಸಿದರು.

ಪ್ರಾಂಶುಪಾಲ ಕೊಟ್ರಗೌಡ ಅಯ್ಯನಗೌಡ್ರ ಮಾತನಾಡಿ, ತಮ್ಮ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸುವ ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು.

ವಿದ್ಯಾರ್ಥಿನಿಯರಲ್ಲಿ ಅಡಗಿರುವ ಕ್ರೀಡಾ ಪ್ರತಿಭೆ ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಶಿಕ್ಷಣ ಸಂಸ್ಥೆಗಳ ಪ್ರಮುಖ ಜವಾಬ್ದಾರಿಯಾಗಿದೆ. ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಪರಸ್ಪರ ಸಹಕಾರದ ಮನೋಭಾವ ಬೆಳೆಸುವುದರ ಜತೆಗೆ ಜೀವನದ ಸವಾಲು ಎದುರಿಸುವ ಸಾಮರ್ಥ್ಯ ಹೆಚ್ಚಿಸುತ್ತವೆ. ಪಂದ್ಯಾವಳಿ ಯಶಸ್ವಿಯಾಗಲು ಸಹಕರಿಸಿದ ಶಿಕ್ಷಣ ಇಲಾಖೆ, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ (ಪದವಿಪೂರ್ವ) ಉಪನಿರ್ದೇಶಕ ಹನುಮಂತರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪದವಿಪೂರ್ವ ಕಾಲೇಜುಗಳ ನೋಡಲ್ ಅಧಿಕಾರಿ ನಾಗರಾಜ್ ಹವಾಲ್ದಾರ್, ತಾಲೂಕು ಪದವಿಪೂರ್ವ ಕಾಲೇಜುಗಳ ನೋಡಲ್ ಅಧಿಕಾರಿ ಕೋರಿ ಹಾಲೇಶ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರಫಿ ಅಹಮದ್ ಖವಾಸ್ ಹಾಗೂ ನಿವೃತ್ತ ಉಪನ್ಯಾಸಕ ಗುರುಬಸವರಾಜ್ ಬಿ.ಎಚ್.ಎಂ. ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ಪದವಿಪೂರ್ವ ಕಾಲೇಜುಗಳ ಕ್ರೀಡಾಪಟು, ಉಪನ್ಯಾಸಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಥ್ರೋಬಾಲ್ ವಿಜೇತರು:

ಬಾಲಕರ ವಿಭಾಗ-ಹಗರಿಬೊಮ್ಮನಹಳ್ಳಿ (ಪ್ರಥಮ), ಹರಪನಹಳ್ಳಿ (ದ್ವಿತೀಯ)

ಬಾಲಕಿಯರ ವಿಭಾಗ:

ಸೊಪ್ಪಿನ ಕಾಳಮ್ಮ ಪದವಿ ಪೂರ್ವ ಕಾಲೇಜು ಹಡಗಲಿ (ಪ್ರಥಮ), ಹಗರಿಬೊಮ್ಮನಹಳ್ಳಿ (ದ್ವಿತೀಯ) ಸ್ಥಾನ ಪಡೆದರು.