ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗ ಕ್ರೀಡೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಸಂಪತ್ ಕುಮಾರ್ ಹೇಳಿದರು. ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಕಡ್ಲೇಗುದ್ದು ಆಂಜನೇಯ ಸ್ವಾಮಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಹಿರೇ ಗುಂಟನೂರು ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ.
ವಿದ್ಯಾರ್ಥಿಗಳು ಕ್ರೀಡಾಭಿಮಾನ ಮೆರೆಯುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ದೈಹಿಕ, ಮಾನಸಿಕ ನೆಮ್ಮದಿಗೆ ಕ್ರೀಡೆ ಹಾಗೂ ಯೋಗದ ಅವಶ್ಯಕತೆ ಇದೆ. ಮನಸ್ಸು, ಶಾಂತಿಗಾಗಿ ಕ್ರೀಡೆ ಬೇಕು. ಕ್ರೀಡೆಗಳು ಕೇವಲ ಬಹುಮಾನ ಗೆಲ್ಲಲು ಅಲ್ಲ. ಮಕ್ಕಳು ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು.ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಚಿದಾನಂದ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗದೆ ಕ್ರೀಡಾ ಸ್ಪರ್ಧೆಗಳಲ್ಲೂ ಭಾಗವಹಿಸಬೇಕು. ಕ್ರೀಡೆಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರೆ ರಾಜ್ಯ, ರಾಷ್ಟ್ರಮಟ್ಟಕ್ಕೆ ಮಟ್ಟಕ್ಕೆ ಆಯ್ಕೆಯಾಗಿ ದೇಶವನ್ನು ಪ್ರತಿನಿಧಿಸುವ ಸೌಭಾಗ್ಯ ದೊರಕಲಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಡಾ. ಮಹೇಶ್ ಮಾತನಾಡಿ, ತರಗತಿ ಪಾಠಕ್ಕೆ ಹೆಚ್ಚಿನ ಆದ್ಯತೆ ನೀಡಿ ಕ್ರೀಡೆಗಳಿಗೆ ಮನ್ನಣೆ ನೀಡದಂತಹ ಮನಸ್ಥಿತಿಯಿಂದ ನಾವು ಹೊರಬರಬೇಕು ಎಂದರು.ಹಿರೇ ಗುಂಟನೂರು ಹೋಬಳಿಯ 22 ಪ್ರೌಢಶಾಲೆಯ ಸುಮಾರು 800 ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚನ್ನಬಸಪ್ಪ ಮುಖ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೀರ್ತಿಕುಮಾರ್, ಪಾಪಣ್ಣ, ಸಹ ಶಿಕ್ಷಕರ ಸಂಘದ ಚನ್ನಯ್ಯ, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಕಲ್ಲೇಶ್ ಮೌರ್ಯ, ತಾಲೂಕು ಅಧ್ಯಕ್ಷ ಅಶೋಕ್ ಇದ್ದರು.