ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಉತ್ತಮ ಆರೋಗ್ಯಕ್ಕೆ ಕ್ರೀಡೆಯು ಸಹಕಾರಿಯಾಗಿದ್ದು, ಮನಸ್ಸು ಮತ್ತು ದೇಹದ ಸದೃಢತೆಯನ್ನು ಕಾಪಾಡಿಕೊಳ್ಳಲು ಉಪಯುಕ್ತವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳು ಓದುವ ಅಭ್ಯಾಸದ ಜೊತೆಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ ತಿಳಿಸಿದರು.ತಾಲೂಕಿನ ಹೊನ್ನವಳ್ಳಿ ಹೋಬಳಿಯ ಮಣಕಿಕೆರೆ ಭುವನೇಶ್ವರಿ ಪ್ರೌಢಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಬಸವೇಶ್ವರ ವಿದ್ಯಾಸಂಸ್ಥೆ ಸಹಯೋಗದಲ್ಲಿ ನಡೆದ ಹಿರಿಯ ಪ್ರಾಥಮಿಕ ಬಾಲಕ ಹಾಗೂ ಬಾಲಕಿಯರ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು, ಕ್ರೀಡೆ ಅಂದರೆ ಕೇವಲ ಗೆಲುವು- ಸೋಲುಗಳ ಪಂದ್ಯವಲ್ಲ, ಅದು ಜೀವನ ಪಾಠವನ್ನು ಕಲಿಸುವ ಶೈಕ್ಷಣಿಕ ವೇದಿಕೆ. ಆದ್ದರಿಂದ ಎಲ್ಲಾ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಸಂಭ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಎಚ್.ಇ. ರಮೇಶ್ ಮಾತನಾಡಿ, ಒಬ್ಬ ವಿದ್ಯಾರ್ಥಿ ಪುಸ್ತಕದಿಂದ ಜ್ಞಾನ ಕಲಿತರೆ, ಕ್ರೀಡಾಂಗಣದಿಂದ ಜೀವನವನ್ನು ಕಲಿಯುತ್ತಾನೆ. ಶಿಸ್ತಿನ ಹೆಜ್ಜೆ, ಸಹನೆಯ ಮನೋಭಾವ ಮತ್ತು ಸಹಕಾರದ ಹಾದಿ ಕ್ರೀಡೆಯ ಮೂಲಕವೇ ಸಾಧ್ಯ. ನಮ್ಮ ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಶಿಕ್ಷಕರ ಕೊರತೆಯಿದ್ದರೂ ಸಹ ಶಾಲೆಗಳಲ್ಲಿನ ಸಹಶಿಕ್ಷಕರು ಮಕ್ಕಳಿಗೆ ಕ್ರೀಡೆಯ ಬಗ್ಗೆ ತರಬೇತಿ ನೀಡುವ ಮೂಲಕ ಮಕ್ಕಳಲ್ಲಿ ಕ್ರೀಡಾ ಉತ್ಸಾಹ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಬಸವೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎನ್.ಹಾಲಪ್ಪ, ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಕಿ ಶಮಂತ, ಭುವನೇಶ್ವರಿ ವಿದ್ಯಾಸಂಸ್ಥೆ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಅಮರಸಿಂಗ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್, ಸಿದ್ದಪ್ಪ, ಉಮೇಶ್, ಭುವನೇಶ್ವರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಪವಿತ್ರ, ದೈಹಿಕ ಶಿಕ್ಷಕರಾದ ಎಚ್.ಎನ್.ಪ್ರಕಾಶ್, ಮಧುಚಂದ್ರ, ಸಹನಾ, ಭಾಗ್ಯ, ದೀಪಕ್, ಶರ್ಪುದ್ದೀನ್, ಮಂಜುನಾಥ್ ಮತ್ತಿತರರಿದ್ದರು.