ವ್ಯಕ್ತಿತ್ವ ನಿರ್ಮಾಣಕ್ಕೆ ಕ್ರೀಡೆ ಸಹಕಾರಿ

| Published : Nov 21 2025, 01:15 AM IST

ಸಾರಾಂಶ

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಶಿಸ್ತು, ಸಂಯಮದ ಜತೆಗೆ ವ್ಯಕ್ತಿತ್ವವನ್ನು ರೂಪಿಸಲು ಕ್ರೀಡೆ ಸಹಕಾರಿಯಾಗಿದ್ದು, ಸೋಲು ಗೆಲುವು ಬಗ್ಗೆ ಯೋಚಿಸದೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ರೂಢಿಸಿಕೊಳ್ಳುವಂತೆ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.

ಶಿಕಾರಿಪುರ: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಶಿಸ್ತು, ಸಂಯಮದ ಜತೆಗೆ ವ್ಯಕ್ತಿತ್ವವನ್ನು ರೂಪಿಸಲು ಕ್ರೀಡೆ ಸಹಕಾರಿಯಾಗಿದ್ದು, ಸೋಲು ಗೆಲುವು ಬಗ್ಗೆ ಯೋಚಿಸದೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ರೂಢಿಸಿಕೊಳ್ಳುವಂತೆ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು. ಗುರುವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ನಡೆದ 2025-26 ನೇ ಸಾಲಿನ ಕುವೆಂಪು ವಿವಿ ಅಂತರ್ ಕಾಲೇಜು (ಪುರುಷ ಮತ್ತು ಮಹಿಳೆ) ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನ್ನಿಸ್ ಪಂದ್ಯಾವಳಿ ಹಾಗೂ ವಿವಿ ತಂಡದ ಆಯ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ಸ್ಪರ್ಧಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೆ ಗೆಲುವು ಸಾಧ್ಯವಿಲ್ಲ. ಸೋಲು ಗೆಲುವು ಹೊರತುಪಡಿಸಿ ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವ ಪ್ರತಿಯೊಬ್ಬ ವಿದ್ಯಾರ್ಥಿ ಬೆಳೆಸಿಕೊಳ್ಳಬೇಕು ಎಂದ ಅವರು, ವಿದ್ಯಾರ್ಥಿ ನಿತ್ಯ ಲವಲವಿಕೆಯ ಜತೆಗೆ ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಶಿಸ್ತು, ಸಂಯಮದಿಂದ ವ್ಯಕ್ತಿತ್ವ ರೂಪಿಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದು ಹೇಳಿದರು.

ಯಡಿಯೂರಪ್ಪನವರ ವಿಶೇಷ ಕಾಳಜಿಯಿಂದಾಗಿ ನಿರ್ಮಾಣವಾದ ಸುಸಜ್ಜಿತ ಒಳಾಂಗಣ ಕ್ರೀಡಾಂಗಣದ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಈ ದಿಸೆಯಲ್ಲಿ ಕಾಲೇಜಿನ ಪ್ರಾಚಾರ್ಯರು ಹೆಚ್ಚಿನ ನಿಗಾವಹಿಸುವಂತೆ ಸೂಚಿಸಿದ ಅವರು, ವಿದ್ಯಾರ್ಥಿಗಳ ಅಪೇಕ್ಷೆ ಮೇರೆಗೆ ಕಾಲೇಜಿನಲ್ಲಿ ಅಗತ್ಯವಿರುವ ಸೌಲಭ್ಯ ಕಲ್ಪಿಸಿಕೊಡಲು ಸಿದ್ಧವಾಗಿದ್ದು, ಉತ್ತಮ ಫಲಿತಾಂಶ, ರಾಷ್ಟ್ರಮಟ್ಟದ ಕ್ರೀಡಾಪಟುಗಳ ನಿರ್ಮಾಣದಿಂದ ಮಾತ್ರ ಸೌಲಭ್ಯ ಸಾರ್ಥಕವಾಗಲಿದೆ ಎಂದು ತಿಳಿಸಿದರು. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಸಿ ವೇಣುಗೋಪಾಲ್ ಮಾತನಾಡಿ, ಭೌದ್ಧಿಕವಾಗಿ, ದೈಹಿಕವಾಗಿ, ಆದ್ಮಾತ್ಮಿಕವಾಗಿ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಲು ಕ್ರೀಡೆಯಿಂದ ಮಾತ್ರ ಸಾಧ್ಯ. ನಿತ್ಯ ಕ್ರೀಡೆ ಅಭ್ಯಾಸದಿಂದ ದಿನಪೂರ್ತಿ ಕ್ರಿಯಾಶೀಲತೆ ಕಾಪಾಡಿಕೊಳ್ಳಬಹುದಾಗಿದೆ ಎಂದರು. .

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ.ಚನ್ನಪ್ಪ ಮಾತನಾಡಿ, ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಅಗತ್ಯವಿರುವ ಸಕಲ ಸೌಲಭ್ಯ ಕಾಲೇಜಿನಲ್ಲಿ ಕಲ್ಪಿಸಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ವೇದಿಕೆಯಲ್ಲಿ ಕುವೆಂಪು ವಿವಿ ಶಂಕರಘಟ್ಟದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎನ್.ಡಿ.ವಿರೂಪಾಕ್ಷ, ಐಕ್ಯೂಎಸಿ ಸಂಚಾಲಕ ಡಾ.ಹರೀಶ್, ಸೌಮ್ಯ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಪಟ್ಟಣ ರಾಕೇಶ್, ದೈಹಿಕ ಶಿಕ್ಷಣ ಬೋಧಕ ಎಸ್.ವಿ.ನಾರಾಯಣ, ಕಾಲೇಜು ಮೇಲುಸ್ತುವಾರಿ ಸಮಿತಿಯ ಕೃಷ್ಣೋಜಿರಾವ್, ಪಾಲಾಕ್ಷಪ್ಪ, ಸುಧೀರ ಮಾರವಳ್ಳಿ ಇತರರಿದ್ದರು.ವರ್ಷಾ ಸಂಗಡಿಗರು ಪ್ರಾರ್ಥಿಸಿದರು. ನಾರಾಯಣ ಸ್ವಾಗತಿಸಿದರು. ರೇಷ್ಮಾ ನಿರೂಪಿಸಿ ವಂದಿಸಿದರು.