ಸಾರಾಂಶ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಕಾಂಚನಾ ಗಂಗಾ ಕ್ರೀಡಾ ಸಂಸ್ಥೆ ಹಾಗೂ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಬೇಸಿಗೆ ಹಾಕಿ ಶಿಬಿರ ಇಲ್ಲಿನ ಜೂನಿಯರ್ ಕಾಲೇಜಿನ ಸಿಂಥೇಟಿಕ್ ಟರ್ಫ್ ಮೈದಾನದಲ್ಲಿ ಪ್ರಾರಂಭವಾಯಿತು.ಶಿಬಿರಕ್ಕೆ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು. ನಂತರ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಕ್ರೀಡೆ ಸಹಕಾರಿಯಾಗಿದ್ದು, ಶಾಲಾ ರಜಾದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಾಕಿ ತರಬೇತಿ ಶಿಬಿರ ಹೆಚ್ಚಿನ ಸಹಕಾರಿಯಾಗಲಿದೆ. ಇಂತಹ ಶಿಬಿರಗಳಿಂದ ಕ್ರೀಡೆಯನ್ನು ಸಂಪೂರ್ಣವಾಗಿ ಕಲಿಯಲು ಅವಕಾಶವಾಗುವುದು. ಶಿಬಿರದಲ್ಲಿ ಎಲ್ಲರೂ ಪಾಲ್ಗೊಂಡು, ಮುಂದಿನ ಜೀವನ ರೂಪಿಸಿಕೊಳ್ಳಲು ಅವಕಾಶ ಇದೆ. ಇಂತಹ ಶಿಬಿರಗಳನ್ನು ಆಯೋಜನೆ ಮಾಡುವುದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಕಾರಿಯಾಗುವುದು ಎಂದರು.
ಕ್ರೀಡಾ ಜಿಲ್ಲೆಯಲ್ಲಿ ಹಾಕಿ ಪ್ರಮುಖ ಕ್ರೀಡೆಯಾದರೂ, ಇನ್ನಿತರ ಕ್ರೀಡೆಯಲ್ಲೂ ಸಾಕಷ್ಟು ಸಾಧನೆ ಮಾಡಿರುವ ಹಲವರನ್ನು ಕಾಣಬಹುದು. ಎಲ್ಲ ಕ್ರೀಡೆಗಳಿಗೂ ಸವಲತ್ತುಗಳನ್ನು ಒದಗಿಸುವುದು ಸರ್ಕಾರದ ಕೆಲಸವಾಗಿದ್ದು, ಈ ನಿಟ್ಟಿನಲ್ಲಿ ಸೆಮಿ ಸಿಂಥೆಟಿಕ್ ಬಾಸ್ಕೆಟ್ ಬಾಲ್ ಒಳಾಂಗಣ ಕ್ರೀಡಾಂಗಣ ಮಾಡುವ ಯೋಜನೆಯಿದ್ದು, ಮುಂದಿನ ಒಂದೆರಡು ವಾರಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಕ್ರೀಡಾಸಕ್ತರಿದ್ದು, ಸರಿಯಾದ ತರಬೇತಿ ಸಿಗುತ್ತಿಲ್ಲ. ಇದರಿಂದಾಗಿ ಹಲವಾರು ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದು, ಎಲೆಮರೆಯ ಕಾಯಿಯಂತೆ ತಮ್ಮ ಜೀವನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಉತ್ತಮ ಕ್ರೀಡಾಪಟುಗಳನ್ನು ರೂಪಿಸಲು ಕಳೆದ ಎರಡು ವರ್ಷಗಳಿಂದ ತರಬೇತಿ ನೀಡಲು ಕಾಂಚನಾ ಗಂಗಾ ಕ್ರೀಡಾ ಸಂಸ್ಥೆ ಹಾಗೂ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ತರಬೇತಿ ಶಿಬಿರವನ್ನು ನೀಡಲಾಗುತ್ತಿದೆ. ಎಲ್ಲ ಆಸಕ್ತರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಚನಾ ಗಂಗಾ ಕ್ರೀಡಾ ಸಂಸ್ಥೆ ಅಧ್ಯಕ್ಷ ಟಿ.ಪಿ. ಚಂಗಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚೌಡ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನತೀಶ್ ಮಂದಣ್ಣ, ಜೂನಿಯರ್ ಕಾಲೇಜಿನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಿ.ಎ. ಲಾರೆನ್ಸ್, ಕೆ.ಟಿ. ಪರಮೇಶ್, ತರಬೇತುದಾರರಾದ ಬಿ.ಎಸ್. ವೆಂಕಟೇಶ್, ಅಂತೋಣಿ, ಬಿ.ಎಸ್. ಸುರೇಶ್ ಇದ್ದರು.;Resize=(128,128))
;Resize=(128,128))