ಸಾರಾಂಶ
ಸಾಗರ: ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ನೆಹರೂ ಮೈದಾನದಲ್ಲಿ ಭಾನುವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರೊಳಗಿನ ಸುಪ್ತ ಪ್ರತಿಭೆ ಪ್ರಕಾಶನಕ್ಕೆ ಇಂತಹ ವೇದಿಕೆಗಳು ಪೂರಕ ಎಂದರು.ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಕಲಿಸಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಮಹತ್ಕಾರ್ಯವನ್ನು ಮಾಡುತ್ತಾರೆ. ಮಕ್ಕಳಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆ ಕಲಿಸುವಲ್ಲಿಯೆ ತೃಪ್ತಿಪಟ್ಟುಕೊಳ್ಳುವ ಶಿಕ್ಷಕರಿಗೆ ತಮ್ಮೊಳಗಿನ ಕ್ರೀಡಾಪಟು, ಸಾಂಸ್ಕೃತಿಕ ಮನಸ್ಸನ್ನು ಹೊರಹಾಕಲು ಇಂತಹ ಸ್ಪರ್ಧೆಗಳು ಅಗತ್ಯವಾಗಿಬೇಕು ಎಂದರು.ಒತ್ತಡದ ನಡುವೆಯೂ ಕೆಲಸ ಮಾಡುವ ಶಿಕ್ಷಕರು ಶಾಲೆಯ ದಿನಚರಿ ಜೊತೆಗೆ ಸರ್ಕಾರದ ಅನೇಕ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕೆ ಸಹಕಾರ ನೀಡುತ್ತಾರೆ. ಪ್ರತಿ ಮೂರು ಅಥವಾ ಆರು ತಿಂಗಳಿಗೊಮ್ಮೆ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆ ನಡೆದರೆ ಒತ್ತಡಮುಕ್ತರಾಗಲು ಸಾಧ್ಯವಿದೆ. ಇಂತಹ ಕ್ರೀಡಾಸ್ಪರ್ಧೆಗಳಿಗೆ ಸರ್ಕಾರದಿಂದ ಅನುದಾನದ ಅಗತ್ಯವಿದ್ದು, ಈ ಬಗ್ಗೆ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮಾಲತೇಶ್ ಮಾತನಾಡಿ, ಸದಾ ಒತ್ತಡದಲ್ಲಿ ಕೆಲಸ ಮಾಡುವ ಶಿಕ್ಷಕ ಸಮೂಹಕ್ಕೆ ಇಂತಹ ಸ್ಪರ್ಧಾ ಕಾರ್ಯಕ್ರಮ ಅಗತ್ಯ ಎಂದು ರಾಜ್ಯದಲ್ಲಿಯೆ ಮೊದಲ ಬಾರಿಗೆ ತಾಲೂಕುಮಟ್ಟದಲ್ಲಿ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಗೆ ಶಿಕ್ಷಕರ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು. ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಎಲ್.ಚಂದ್ರಪ್ಪ, ರವಿಕುಮಾರ್, ಸಮನ್ವಯಾಧಿಕಾರಿ ಡಾ.ಅನ್ನಪೂರ್ಣ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್, ಪ್ರಮುಖರಾದ ಸತ್ಯನಾರಾಯಣ ಸಿರಿವಂತೆ, ಮನೋಹರ.ಟಿ.ವಿ, ರಾಜಶೇಖರ ಶೆಟ್ಟಿ, ವಿಕ್ಟೋರಿಯಾ ಫರ್ನಾಂಡಿಸ್, ರಮೇಶ್.ಎನ್, ದೇವೇಂದ್ರಪ್ಪ ಪಾಲಾಕ್ಷಪ್ಪ, ಪ್ರಭು.ಇ.ಎನ್, ದಿನೇಶ್.ಎನ್.ಕೆ, ಚಂದ್ರಪ್ಪ ಇನ್ನಿತರರು ಹಾಜರಿದ್ದರು.